ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಸಾರಿಗೆ ಸಿಬ್ಬಂದಿ ‘ಬೆಂಗಳೂರು ಚಲೋ’ ಪ್ರತಿಭಟನೆ (Karnataka Transport employees strike) ನಡೆಸಿದ್ದರು. ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಬ್ಬಂದಿ, ಮೊದಲು ಸಂಜೆ 4ರವರೆಗೆ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದರು. ಬೇಡಿಕೆ ಈಡೇರದಿದ್ದರೆ ನಾಳೆ ಬಂದ್‌ಗೆ ಕರೆ ನೀಡುತ್ತೇವೆ ಅಂತಾ ಹೇಳಿದ್ದರು. ಆದರೆ, ಈಗ ಮಾರ್ಚ್ 2ರ ಗಡುವು ನೀಡಿ, ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ.
ಕೆಎಸ್‌ಆರ್‌ಟಿಸಿ ಸಿಬ್ಬಂದಿ ರಾಜ್ಯ ಸರ್ಕಾರಕ್ಕೆ ವೇತನ ಪರಿಷ್ಕರಣೆ ಹಾಗೂ 38 ತಿಂಗಳ ಅರಿಯರ್ಸ್ ನೀಡಲು ಮಾರ್ಚ್ 2ರ ಗಡುವು ನೀಡಿದ್ದಾರೆ. ಈಗಾಗಲೇ 26 ತಿಂಗಳ ಹಿಂಬಾಕಿ ನೀಡುವುದಾಗಿ ಸರ್ಕಾರ ಒಪ್ಪಿಕೊಂಡಿದೆ. ಅಲ್ಲದೇ ವೇತನ ಪರಿಷ್ಕರಣೆಗೂ ಸಹ ಒಪ್ಪಿಕೊಂಡಿದೆ. ಆದರೂ ಸಾರಿಗೆ ನೌಕರರು ಸುಮ್ಮನಾಗುತ್ತಿಲ್ಲ. 26 ತಿಂಗಳದ್ದು ಬೇಡ, ನಮಗೆ 38 ತಿಂಗಳದ್ದು ಹಿಂಬಾಕಿ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಸರ್ಕಾರ ನೌಕರಸ್ಥರ ಬಹುತೇಕ ಬೇಡಿಕೆ ಈಡೇರಿಸಿದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾ, ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನೌಕರರ ಜತೆ ಚರ್ಚಿಸಿದರು.
ನಾಳೆಯಿಂದ ಮುಷ್ಕರ ನಡೆಸದಿರಲು ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಆದ್ರೆ, ಸರ್ಕಾರಕ್ಕೆ ಮಾರ್ಚ್ 2ರ ಗಡುವು ನೀಡಿದ್ದು, ಮಾರ್ಚ್ 2ರೊಳಗಾಗಿ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವರಾಜೇ ಅರಸ್ ಹೇಳಿದ್ದಾರೆ. ಆದರೆ, ನಾಳೆಯಿಂದಲೇ ಮುಷ್ಕರ ನಡೆಸಬೇಕೆಂದು ಹಲವರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ : ಸರ್ಕಾರದ ಜಾಗದಲ್ಲಿ ಹೈಟೆಕ್ ಪೌಲ್ಟ್ರಿ | 2 ವರ್ಷದ ಹಿಂದೆ ಕೇಸ್ ದಾಖಲಾದ್ರೂ ಕ್ಯಾರೇ ಎನ್ನದ ಅಧಿಕಾರಿಗಳು!



















