ನವದೆಹಲಿ: 2025ನೇ ಸಾಲಿನ ಗಣರಾಜ್ಯೋತ್ಸವದ ಮುನ್ನಾ ದಿನವಾದ ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ “ಪದ್ಮ”ಗಳ ಹೆಸರುಗಳನ್ನು ಘೋಷಿಸಿದ್ದಾರೆ. ಗೋವಾದ 100 ವರ್ಷದ ಸ್ವಾತಂತ್ರ್ಯ ಹೋರಾಟಗಾರ್ತಿ ಲಿಬಿಯಾ ಲೋಬೋ ಸರ್ದೇಸಾಯಿ, ಪಶ್ಚಿಮ ಬಂಗಾಳದಲ್ಲಿ ಪುರುಷರದ್ದೇ ಪಾರುಪತ್ಯವಿದ್ದ ಧಕ್ ವಾದನವನ್ನು 150 ಮಹಿಳೆಯರಿಗೆ ಕಲಿಸಿ ಹೊಸ ಸಂಚಲನ ಮೂಡಿಸಿದ ಗೋಕುಲ್ ಚಂದ್ರ ಸೇರಿದಂತೆ ಒಟ್ಟು 30 ಮಂದಿ ಎಲೆ ಮರೆ ಕಾಯಿಗಳಿಗೆ ಪ್ರಸಕ್ತ ಸಾಲಿನ ಪದ್ಮಶ್ರೀ ಗೌರವ ಸಂದಿದೆ. ಪ್ಯಾರಾಲಿಂಪಿಯನ್ ಹರ್ವೀಂದರ್ ಸಿಂಗ್ ಅವರೂ ಪದ್ಮಶ್ರೀಗೆ ಪಾತ್ರರಾಗಿದ್ದಾರೆ.
ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವಲ್ಲಿ ವಿಶೇಷ ಪ್ರಯತ್ನ ನಡೆಸುತ್ತಿರುವ ದೆಹಲಿಯ ಸ್ತ್ರೀರೋಗ ತಜ್ಞರಾದ ಡಾ. ನೀರಜ್ ಭಾಟ್ಲಾ, ನಯೀ ಆಶಾ ಎಂಬ ಪ್ರತಿಷ್ಠಾನದ ಮೂಲಕ ಮುಸಾಹರ್ ಸಮುದಾಯದ ಸಬಲೀಕರಣಕ್ಕಾಗಿ ಕಳೆದ 22 ವರ್ಷಗಳಿಂದ ಹೋರಾಡುತ್ತಿರುವ ಭೋಜ್‌ಪುರದ ಸಾಮಾಜಿಕ ಹೋರಾಟಗಾರ ಭೀಮ್ ಸಿಂಗ್ ಭವೇಶ್, 5 ದಶಕಗಳಿಂದ ಥಾವಿಲ್ ವಾದನದ ಮೂಲಕ ದಕ್ಷಿಣ ಭಾರತದಲ್ಲಿ ಖ್ಯಾತಿ ಪಡೆದಿರುವ ಪಿ.ದಚ್ಚಣಮೂರ್ತಿ, ನಾಗಾಲ್ಯಾಂಡ್‌ನ ಹಣ್ಣಿನ ಕೃಷಿಕ ಎಲ್. ಹಾಂಗ್‌ಥಿಂಗ್, ಮಧ್ಯಪ್ರದೇಶದ ಸಾಮಾಜಿಕ ಉದ್ಯಮಿ ಸಲ್ಲಿ ಹೋಳ್ಕರ್, ಮರಾಠಿ ಲೇಖಲ ಮಾರುತಿ ಭುಜಂಗರಾವ್ ಚಿತ್ತಂಪಳ್ಳಿ ಮುಂತಾದವರು ಪದ್ಮಶ್ರೀ ಪಡೆದವರಲ್ಲಿ ಪ್ರಮುಖರು.
ಇದಲ್ಲದೇ, ಕುವೈಟ್ ನ ಯೋಗ ಪಟು ಶೈಖಾ ಅಜ್ ಅಲ್ ಸಬಾಹ್, ಉತ್ತರಾಖಂಡದ ಟ್ರಾವೆಲ್ ಬ್ಲಾಗರ್ ದಂಪತಿ ಹಗ್ ಮತ್ತು ಕೊಲೀನ್ ಅವರಿಗೂ ಪದ್ಮ ಪ್ರಶಸ್ತಿ ಸಂದಿದೆ. ಜೊತೆಗೆ ವಿಲಾಸ್ ಡಾಂಗ್ರೆ, ವೆಂಕಪ್ಪ ಅಂಬಾಜಿ ಸುಗೇಟ್ಕರ್, ಹರಿಮನ್ ಶರ್ಮಾ, ಜುಮ್ದೇ ಯೋಂಗಮ್ ಗ್ಯಾಮ್ಲಿನ್, ನರೇನ್ ಗುರುಂಗ್, ಜಗದೀಶ್ ಜೋಶಿಲಾ, ಬತೂಲ್ ಬೇಗಂ, ಪಂಡಿ ರಾಮ್ ಮಾಂಡವಿ, ನಿರ್ಮಲಾ ದೇವಿ ಅವರೂ ದೇಶದ ಮೂರನೇ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದಾರೆ.