ಉಡುಪಿ ಜಿಲ್ಲೆಯ ಬೈಂದೂರು ವಲಯದ ತೆಂಕಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ ಶಾಲಾ ವಾರ್ಷಿಕೋತ್ಸವ ನಡೆಯಿತು.
ನಿವೃತ್ತ ಶಿಕ್ಷಕ ಸದಾಶಿವ ಶಾನುಭಾಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಿದರೆ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಮಾಜಿ ಶಾಸಕ ಗೋಪಾಲ್ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವನೆ ಹೋಗಲಾಡಿಸಲು ಶಾಲಾ ವಾರ್ಷಿಕೋತ್ಸವ ಉತ್ತಮವಾದ ವೇದಿಕೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕ್ರೀಡಾಕೂಟ ಮತ್ತು ಸಾಂಸ್ಕೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಳೆ ವಿದ್ಯಾರ್ಥಿ ಸಂಘದಿಂದ ಸಾಮಾಜಿಕ ನಗೆ ನಾಟಕ ಪ್ರದರ್ಶನಗೊಂಡಿತು. ಎಸ್ ಡಿಎಂಸಿ ಅಧ್ಯಕ್ಷ ಗೋವಿಂದ ಬಿ, ರಮೇಶ್ ಎಚ್, ಎಸ್ ಜೋಗಿ, ಅಬ್ದುಲ್ ಸಲಾಂ, ಡಾ. ಪ್ರದೀಪ್ ಗಾಣಿಗ, ಸುಜಾತ ಭಟ್, ಪ್ರಮೀಳಾ, ಉಮಾ ಬಿ.ಎನ್, ಸದಾಶಿವ ಶಾನ್ ಭಾಗ್, ಗುರುರಾಜ್ ಗಂಟಿಹೊಳೆ, ಸುಕೇಶ್ ಕುಮಾರ್ ಶೆಟ್ಟಿ, ಸುಬ್ರಹ್ಮಣ್ಯ ಜೋಗಿ, ಗಿರಿಜ ಸೇರಿದಂತೆ ಹಲವರು ಇದ್ದರು.