ಚೆನ್ನೈ : ಕರೂರು ಕಾಲ್ತುಳಿತ ದುರಂತದ ಸ್ಥಳಕ್ಕೆ ಭೇಟಿ ನೀಡಿ ‘ಮಕ್ಕಳ್ ನೀಧಿ ಮೈಯಂ’ (ಎಂಎನ್ಎಂ) ಅಧ್ಯಕ್ಷ, ಬಹುಭಾಷಾ ನಟ ಕಮಲ್ ಹಾಸನ್ ನೀಡಿದ ಹೇಳಿಕೆಯನ್ನು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಟೀಕಿಸಿದ್ದು, ಕಮಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಒಂದು ರಾಜ್ಯಸಭಾ ಸೀಟಿಗಾಗಿ ಕಮಲ್ ಹಾಸನ್ ತಮ್ಮ ಆತ್ಮವನ್ನು ಮಾರಿಕೊಂಡಿದ್ದಾರೆ,” ಎಂದೂ ಆರೋಪಿಸಿದ್ದಾರೆ.
ಸೆಪ್ಟೆಂಬರ್ 27 ರಂದು ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷದ ರ‍್ಯಾಲಿಯಲ್ಲಿ 41 ಜನರನ್ನು ಬಲಿಪಡೆದ ಕಾಲ್ತುಳಿತ ದುರಂತದ ಸ್ಥಳಕ್ಕೆ ಸೋಮವಾರ ಕಮಲ್ ಭೇಟಿ ನೀಡಿ ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದರು. ಇದೊಂದು ದೊಡ್ಡ ದುರಂತ ಎಂದು ಬಣ್ಣಿಸಿದ್ದ ಅವರು, “ತಪ್ಪೊಪ್ಪಿಕೊಳ್ಳಲು ಹಾಗೂ ಕ್ಷಮೆಯಾಚಿಸಲು ಇದು ಸಕಾಲ,” ಎಂದು ಹೇಳುವ ಮೂಲಕ, ದುರಂತಕ್ಕೆ ಕಾರ್ಯಕ್ರಮದ ಸಂಘಟಕರೇ ಹೊಣೆ ಎಂಬ ಅರ್ಥದಲ್ಲಿ ಮಾತನಾಡಿದ್ದರು.
ಅಲ್ಲದೆ, ಪೊಲೀಸರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಅವರನ್ನು ಟೀಕಿಸುವುದು ಸರಿಯಲ್ಲ ಎನ್ನುವ ಮೂಲಕ ಕಮಲ್ ಹಾಸನ್, ಪೋಲೀಸ್ ಇಲಾಖೆಯನ್ನು ಸಮರ್ಥಿಸಿಕೊಂಡಿದ್ದರು. “ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಘನತೆಯಿಂದ ನಡೆದುಕೊಂಡಿದ್ದಾರೆ ಮತ್ತು ಮೆಚ್ಚುಗೆಗೆ ಪಾತ್ರರಾಗಿದ್ದಾರೆ,” ಎಂದೂ ಹೇಳಿದ್ದರು.
ಇದರ ಬೆನ್ನಲ್ಲೇ ಮಾತನಾಡಿರುವ ಅಣ್ಣಾಮಲೈ, ಕರೂರು ದುರಂತದ ವಿಚಾರದಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷವನ್ನು ಬೆಂಬಲಿಸುವ ಮೂಲಕ ಕಮಲ್ ಹಾಸನ್, ತಮ್ಮ ಆತ್ಮವನ್ನು ಮಾರಿಕೊಂಡಿದ್ದಾರೆ. ಕರೂರಿಗೆ ಹೋಗಿ ಆಡಳಿತದ ತಪ್ಪಿಲ್ಲ ಎಂದು ಹೇಳಿದರೆ ಯಾರು ಒಪ್ಪಿಕೊಳ್ಳುತ್ತಾರೆ? ಕಮಲ್ ಹಾಸನ್ ಏನು ಹೇಳಿದರೂ ತಮಿಳುನಾಡಿನ ಜನರು ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ,” ಎಂದು ಹೇಳಿದ್ದಾರೆ. ಅಲ್ಲದೆ, “ಕಮಲ್ ಹಾಸನ್ ಒಬ್ಬ ಉತ್ತಮ ನಟ, ಅದರಲ್ಲಿ ಅನುಮಾನವಿಲ್ಲ. ಆದರೆ ರಾಜಕೀಯಕ್ಕೆ ಬಂದರೆ, ಅವರು ಹೇಳುವುದೆಲ್ಲವೂ ಏಕಪಕ್ಷೀಯವಾಗಿರುತ್ತದೆ ಮತ್ತು ಕರೂರಿನಂತಹ ಗಂಭೀರ ವಿಷಯದಲ್ಲೂ ಡಿಎಂಕೆಗೆ ಅನುಕೂಲ ಮಾಡಿಕೊಡುವಂತಿರುತ್ತದೆ,” ಎಂದು ಟೀಕಿಸಿದ್ದಾರೆ.
Annamalai criticizes KamalHaasan RajyaSabha