ಕಾರವಾರ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ನಿರ್ಮಾಣವಾಗಲಿರುವ ಜೆಎಸ್‌ಡಬ್ಲ್ಯೂ ಕೇಣಿ ಬಂದರು ಜಿಲ್ಲೆಯ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸಲಿದೆ.
ಆ. 22ರಂದು ಸಾರ್ವಜನಿಕ ಅಹವಾಲು ಆಲಿಕೆ ಸಭೆ ಜಿಲ್ಲಾಡಳಿತ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಡೆಯುತ್ತಿದ್ದು, ಸಾರ್ವಜನಿಕರ ಚಿತ್ತ ಆ ಕಡೆಗಿದೆ.
ಈವರೆಗೂ ಈ ಕೇಣಿ ಬಂದರು ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ಬಂದರು ನಿರ್ಮಾಣವಾದರೇ ಆರ್ಥಿಕ ಬೆಳವಣಿಗೆಯೂ ಆಗುತ್ತದೆ ಎಂಬ ಅಭಿಪ್ರಾಯೌೂ ಮೂಡಿದೆ. ಕೇಣಿಯಲ್ಲಿ ಸರ್ವಋತು ಗ್ರೀನ್ ಫೀಲ್ಡ್ ಬಂದರು ನಿರ್ಮಾಣ ಕಾರ್ಯಗಳು ಆರಂಭವಾದರೆ, ಸಂಪೂರ್ಣವಾಗಿ ಆ ಪ್ರದೇಶ ಆರ್ಥಿಕ ಹಾಗೂ ಸಾಮಾಜಿಕವಾಗಿ ಮಹತ್ತರ ಬದಲಾವಣೆ ಕಾಣಲಿದೆ.
ಈ ಮಹತ್ವಾಕಾಂಕ್ಷೆಯ ಈ ಯೋಜನೆ ಸಾಕಾರವಾದರೆ ನೇರ ಮತ್ತು ಪರೋಕ್ಷವಾಗಿ ಸಾವಿರಾರು ಮಂದಿಗೆ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಬಂದರಿನ ಕಾರ್ಯಾಚರಣೆಯೊಂದಿಗೆ ಸಾರಿಗೆ, ಲಾಜಿಸ್ಟಿಕ್ಸ್, ಗೋದಾಮು, ಹೋಟೆಲ್, ಲಾಜ್, ಇತರ ಉದ್ಯೋಗ ಕ್ಷೇತ್ರಗಳಿಗೂ ಉತ್ತೇಜನ ನೀಡಲಿದೆ.
ಬಂದರಿನ ನಿರ್ಮಾಣದಿಂದ ಮೂಲಸೌಕರ್ಯವೂ ವೇಗ ಪಡೆಯುತ್ತವೆ. ಉತ್ತಮ ರಸ್ತೆ, ರೈಲು ಸಂಪರ್ಕ, ವಸತಿ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ವಿಸ್ತರಣೆ ಸಾಧ್ಯವಾಗಲಿದೆ. ಮಂಗಳೂರು ಬಂದರಿನ ಬೆಳವಣಿಗೆಯೊಂದಿಗೆ ಸುರತ್ಕಲ್ ಮತ್ತು ಪಣಂಬೂರು ಪ್ರದೇಶಗಳು ನಗರೀಕರಣವಾದಂತೆ, ಕೇಣಿ ಬಂದರಿನಿಂದಲೂ ಇಂತಹ ಮೀನುಗಾರಿಕಾ ನಚಟುವಟಿಕೆಗಳು ಸುಗಮವಾಗಿ ಸಾಧ್ಯವಾಗಲಿದೆ.
ಕೇಣಿ ಬಂದರು ಅಭಿವೃದ್ಧಿಯಿಂದ ಸರಕುಗಳ ಆಮದು ಮತ್ತು ರಫ್ತಿನ ವೆಚ್ಚದಲ್ಲಿ ಗಣನೀಯ ಉಳಿತಾಯವಾಗಲಿದೆ. ಇದು ರಾಜ್ಯದ ಜಿಎಸ್ಟಿ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ. ಒಟ್ಟು 4200 ಕೋಟಿ ವೆಚ್ಚದಲ್ಲಿ ಕೇಣಿ ಬಂದರು ನಿರ್ಮಾಣಕ್ಕೆ ಜೆಎಸ್ಡಬ್ಲ್ಯೂ ಕಂಪನಿ ಹೂಡಿಕೆ ಮಾಡಲು ಮುಂದಾಗಿದೆ ಮತ್ತು ಈಗಾಗಲೇ ಟೆಂಡರ್ ಪಡೆದುಕೊಂಡಿದೆ. ಈ ಬಂದರು ಸಂಪೂರ್ಣವಾಗಿ ಸಮುದ್ರದಲ್ಲಿ ಸುಮಾರು ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ. ಆರಂಭಿಕ ವರ್ಷಗಳಲ್ಲಿ ಕೇಣಿ ಬಂದರು ಜೆಎಸ್ಡಬ್ಲ್ಯೂ ಕಂಪನಿಯ ಅಧೀನದಲ್ಲಿರಲಿದೆ, ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಹರಿದು ಬರಲಿದೆ. 30 ವರ್ಷಗಳ ನಂತರ, ಕೇಣಿ ಬಂದರು ಕರ್ನಾಟಕ ಮೆರಿಟೈಮ್ ಬೋರ್ಡಗೆ ಹಿಂತಿರುಗಲಿದೆ.
ಕೈಗಾರಿಕಾ ಹೂಡಿಕೆಗಳಿಗೂ ಈ ಬಂದರು ದಾರಿತೋರುವ ಸಾಧ್ಯತೆ ಇದೆ.ಉಕ್ಕು, ಸಿಮೆಂಟ್, ಆಹಾರ ಸಂಸ್ಕರಣೆ, ಮೀನು ಸಂಸ್ಕರಣೆ, ರಾಸಾಯನಿಕ ಉತ್ಪನ್ನಗಳಂತಹ ಕೈಗಾರಿಕೆಗಳು ಬಂದರಿನ ಸೌಲಭ್ಯವನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಬೆಳೆಯುವ ಸಾಧ್ಯತೆಗಳಿವೆ. ಇದರಿಂದ ಜಿಲ್ಲೆ ಕೈಗಾರಿಕಾ ಕೇಂದ್ರವಾಗಿ ರೂಪುಗೊಳ್ಳಬಹುದು. ಅದೇ ರೀತಿ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ, ಸುಂದರ ಕಡಲತೀರಗಳು, ಪರ್ವತ ಪ್ರದೇಶಗಳು ಭಾಗ ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವಾಗಬಹುದು.
ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ, ಮಹಿಳೆಯರಿಗೆ ಸ್ವಾವಲಂಬನೆ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆತರೆ ಕೇಣಿ ಬಂದರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದಾರಿ ತೋರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿ (ಬೆಲೇಕೇರಿ ಸಮೀಪ) ಯಲ್ಲಿ ಪ್ರಸ್ತಾಪಿತ ಜೆಎಸ್‌ಡಬ್ಲ್ಯೂ ಕೇಣಿ ಬಂದರು ಒಂದು ಪ್ರಮುಖ ಅಭಿವೃದ್ಧಿ ಯೋಜನೆಯಾಗಿದೆ. ಇದು ಸರ್ಕಾರದಿಂದ
2022-23ರ ಬಜೆಟ್‌ನಲ್ಲಿ 5015ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಆರಂಭಗೊಂಡಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ನಿರ್ಮಾಣವಾಗುತ್ತಿದೆ. ಈ ಬಂದರು ಕರ್ನಾಟಕದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಲಿದ್ದು, ಆಮದು-ರಫ್ತುಗಳನ್ನು ಸುಗಮಗೊಳಿಸಿ, ಇತರ ರಾಜ್ಯಗಳ ಬಂದರುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ. ಇದರಿಂದ ರಾಜ್ಯದ ಆಮದು ವೆಚ್ಚ ಕಡಿಮೆಯಾಗಿ, ಸ್ಥಳೀಯ ಉದ್ಯಮಗಳು ಬೆಳೆಯಲು ಸಹಾಯವಾಗುತ್ತದೆ. ಸರ್ಕಾರದ ಈ ಯೋಜನೆಯು ಸಮಾಜ-ಸಾಂಸ್ಕೃತಿಕ ಅಭಿವೃದ್ಧಿಗೂ ಉತ್ತೇಜನ ನೀಡುತ್ತದೆ ಎಂದು ದಾಖಲೆಗಳು.ಸೂಚಿಸುತ್ತವೆ.
ಉದ್ಯೋಗ ಸೃಷ್ಟಿ
ಬಂದರು ನಿರ್ಮಾಣದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಂದರು ಆಧಾರಿತ ಕೈಗಾರಿಕೆಗಳು ಉತ್ತೇಜನ ಪಡೆಯಲಿವೆ. ಇದು ಕರಾವಳಿ ಪ್ರದೇಶ ಮತ್ತು ರಾಜ್ಯದ ಕೈಗಾರಿಕೆಗಳ ಲಾಭಾಂಶ ಸುಧಾರಿಸುವುದರ ಜತೆಗೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಕರಾವಳಿ ಪ್ರದೇಶ ಮತ್ತು ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ನೆರವಾಗಲಿದೆ.
ಮೀನುಗಾರಿಕೆಗೆ ಸಮಸ್ಯೆ ?
ತಜ್ಞರ ಪ್ರಕಾರ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಕೇಣೆಯಲ್ಲಿ ಗ್ರೀನ್ ಫಿಲ್ಡ್ ವಾಣಿಜ್ಯ ಬಂದರು ನಿರ್ಮಾಣದಿಂದ ಮೀನುಗಾರಿಗೆ ನಾಶವಾಗುತ್ತದೆ ಎಂಬುದು ಪೂರ್ಣ ಸತ್ಯವಲ್ಲ, ಮೀನುಗಾರಿಕೆಯ ಅಭಿವೃದ್ಧಿಗೂ ವಾಣಿಜ್ಯ ಬಂದರು ಪೂರಕವಾಗಿದೆ. ಇಲ್ಲಿ ಸಿಗುವ ಮೀನುಗಳು ಪ್ರಾದೇಶಿಕ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದು, ಅವುಗಳಿಗೆ ಈವರೆಗೂ ಅಂತರಾಷ್ಟ್ರೀಯ ಮಾರುಕಟ್ಟೆ ಸಿಕ್ಕಿಲ್ಲ. ವಾಣಿಜ್ಯ ಬಂದರು ನಿರ್ಮಾಣದ ನಂತರ ಇಲ್ಲಿನ ಮೀನುಗಳ ಜೊತೆ ಮೀನುಗಳಿಂದ ಸಿದ್ಧಪಡಿಸಿದ ಉಪ್ಪಿನಕಾಯಿ ಸೇರಿ ಹಲವು ಉತ್ಪನ್ನಗಳಿಗೆ ಬಹುದೊಡ್ಡ ಮಾರುಕಟ್ಟೆ ಸಿಗಲಿದೆ. ಪ್ರಪಂಚದ ನಾನಾ ಭಾಗಗಳಿಂದ ಬರುವ ಜನ ಇಲ್ಲಿನ ಮೀನುಗಳಿಗೆ ಮಾರು ಹೋಗುವುದರಲ್ಲಿ ಸಂಶಯವೇ ಇಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ.