ಬೆಂಗಳೂರು: ವ್ಯಕ್ತಿಯೋರ್ವರು ಗೌರವಕ್ಕೆ ಅಂಜಿ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ನಡೆದಿದೆ.
ಈ ಘಟನೆ ನಗರದ ಮೃತಹಳ್ಳಿ ಠಾಣಾ ವ್ಯಾಪ್ತಿಯ ಜಕ್ಕೂರಿನ ಹತ್ತಿರ ನಡೆದಿದೆ. 45 ವಯಸ್ಸಿನ ಮೋಹನ್ ಕುಮಾರ್ ಎಂಬಾತ ಚಾಕುವಿನಿಂದ ತನ್ನ ಕತ್ತನ್ನು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಮೃತಹಳ್ಳಿ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಮೋಹನ್ ಕುಮಾರ್ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ. ಆತನ ಪತ್ನಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಈತನ ಬಾಮೈದ ಮಾಡಿದ್ದ ಕೆಲಸ ಮೋಹನ್ ಕುಮಾರ್ ಗೆ ತಲೆ ತಗ್ಗಿಸುವಂತೆ ಮಾಡಿತ್ತು. ವಿವಿ ಪುರಂ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಆತ ಅರೆಸ್ಟ್ ಆಗಿದ್ದ.
ಅಲ್ಲದೇ, ಆತ್ಮಹತ್ಯೆ ಮಾಡಿಕೊಂಡಿರುವ ಮೋಹನ್ ಕುಮಾರ್ ಅವರ ಮನೆಯಲ್ಲಿ ಚಿನ್ನಾಭರಣ ತಂದಿಟ್ಟಿದ್ದ. ಹೀಗಾಗಿ ತನಿಖೆ ನಡೆಸಿದ್ದ ಪೊಲೀಸರು, ಮೋಹನ್ ಕುಮಾರ್ ಮನೆಯಲ್ಲಿ ಸಿಕ್ಕ ಚಿನ್ನಾಭರಣ ವಶಕ್ಕೆ ಪಡೆದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಹೀಗಾಗಿ ಠಾಣೆಗೆ ಓಡಾಡುವ ಪರಿಸ್ಥಿತಿ ಎದುರಾಗಿತ್ತು.
ಹೀಗಾಗಿ ನೊಂದಿದ್ದ ಮೋಹನ್ ಕುಮಾರ್ ಗೆ ಚಿನ್ನ ಕಳೆದುಕೊಂಡಿದ್ದ ದೂರುದಾರ ಮನಬಂದಂತೆ ಬೈದಿದ್ದ. ನಿನ್ನ ಮೈದುನನ ಜೊತೆಗೆ ಸೇರಿ ನೀನು ಕಳ್ಳತನ ಮಾಡಿರಬಹುದು ಎಂದು ನಿಂದಿಸಿದ್ದ ಎನ್ನಲಾಗಿದೆ. ಹೀಗಾಗಿ ತೀವ್ರವಾಗಿ ಮನನೊಂದಿದ್ದ. ಹೀಗಾಗಿ ಚಾಕುವಿನಿಂದ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


















