ಧಾರವಾಡ: ‘ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾಗಿರುವ ಘಟನೆಗೆ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಈ ವಿಷಯವಾಗಿ ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್, ಈಗ ಇಡೀ ತಿರುಪತಿಯನ್ನು ಗೋ ಮೂತ್ರದ ಮೂಲಕ ಶುದ್ಧೀಕರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಬಾಬು ನಾಯ್ಡು, ಪವನ ಕಲ್ಯಾಣ, ಮತಾಂತರ, ಇಸ್ಲಾಮೀಕರಣ ಶುದ್ಧೀಕರಣ ಮಾಡುತ್ತಿದ್ದಾರೆ. ತಿರುಪತಿ ತಿಮ್ಮಪ್ಪನ ಕ್ಷೇತ್ರದಲ್ಲಾದ ಘೋರ ಅನ್ಯಾಯ ತೊಳೆಯುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಸಮಾಜ ಅವರಿಗೆ ಬೆಂಬಲಕ್ಕೆ ನಿಲ್ಲಬೇಕು. ಇಡೀ ಕ್ಷೇತ್ರವನ್ನು ಶುದ್ಧ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಲಡ್ಡುವಿನಲ್ಲಿ ಶುದ್ಧವಾದ ತುಪ್ಪ ಬಳಸಿಲ್ಲ. ಗೋಮಾಂಸದ ಕೊಬ್ಬು, ಮೀನಿನ ಎಣ್ಣೆ ಉಪಯೋಗಿಸಿದ್ದಾರೆ. ಇದು ಸಣ್ಣ ಆರೋಪವಲ್ಲ. ಗಂಭೀರವಾದ ಆರೋಪ. ಜಗನ್ ರೆಡ್ಡಿ ಅವಧಿಯ ಘೋರ ಅಪರಾಧ. ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಇದನ್ನು ಹಿಂದೂ ಸಮಾಜ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡೀ ಜಗತ್ತಿನ ಕೋಟ್ಯಂತರ ಭಕ್ತರು ಅಲ್ಲಿಗೆ ಬರುತ್ತಾರೆ. ಭಕ್ತಿ-ಭಾವದಿಂದ ತುಂಬಿ ತುಳಕುವ ಪ್ರಸಾದದಲ್ಲಿ ಇಂತಹ ದ್ರೋಹ ಮಾಡಿದ್ದಾರೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಈ ಘೋರ ಅಪರಾಧ ಮಾಡಿದವರನ್ನು ಎನ್ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಲಡ್ಡುವಿನಲ್ಲಿ ವಿಷ ಹಾಕಿದ್ರೆ? ಇದೇ ಲಡ್ಡುವಿನಲ್ಲಿ ಸ್ಲೋ ಪಾಯಿಸನ್ ಹಾಕಿದ್ರೆ? ಅದನ್ನೆಲ್ಲ ಹಾಕುವಂತಹ ನೀಚ ಬುದ್ಧಿ, ಪ್ರವೃತ್ತಿ ಇವತ್ತಿನ ರಾಜಕಾರಣಗಳಲ್ಲಿದೆ. ಜಗನ್ ತಂದೆ ವೈ.ಎಸ್. ರಾಜಶೇಖರ ರೆಡ್ಡಿ ಅಲ್ಲಿನ ಬೆಟ್ಟಗಳನ್ನು ಕ್ರಿಶ್ಚಿಯನ್ರಿಗೆ ಕೊಟ್ಟಿದ್ದರು. ಹೀಗಾಗಿ ಅವರು ತಿಮ್ಮಪ್ಪನ ಶಾಪದಿಂದ ಸತ್ತರು. ಅವರ ಎಲುಬು ಸಹ ಸಿಗಲಿಲ್ಲ. ಆತ ಸುಟ್ಟು ಬೂದಿಯಾಗಿ ಹೋಗಿದ್ದ. ಅದೇ ಮಾದರಿಯಲ್ಲಿ ಜಗನ್ ಹೀನಾಯವಾಗಿ ಸೋತಿದ್ದಾರೆ. ಇದು ಹಿಂದು ಸಮಾಜ ಮತ್ತು ತಿರುಪತಿ ತಿಮ್ಮಪ್ಪನ ಶಾಪ ಎಂದು ಗುಡುಗಿದ್ದಾರೆ.