ಬನ್ನೇರುಘಟ್ಟ : ಇತಿಹಾಸದಲ್ಲಿಯೆ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಪ್ರಾಣಿಗಳ ವಿನಿಮಯ ಮಾಡಿಕೊಳ್ಳಲು ಬನ್ನೇರುಘಟ್ಟ ಜೈವಿಕ ಉದ್ಯಾನವನ ಮುಂದಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ನಿರಂತರ ಪ್ರಯತ್ನದಿಂದಾಗಿ ಜಪಾನ್‌ನ ಹಿಮೇಜಿ ಸೆಂಟ್ರಲ್ ಪಾರ್ಕ್‌ನೊಂದಿಗೆ ಪ್ರಾಣಿಗಳ ವಿನಿಮಯ ಮಾಡಿಕೊಳ್ಳಲಾಗಿದೆ.
ಈಗಾಗಲೇ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಜಪಾನಿನ ಚೀತಾ, ಜಾಗ್ವಾರ್, ಪೂಮಾ, ಚಿಂಪಾಂಜಿ, ಕ್ಯಾಪುಚಿನ್ ಕೋತಿಗಳನ್ನು ಬರಮಾಡಿಕೊಳ್ಳಲಾಗಿದೆ. ಇನ್ನು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 4 ಚೀತಾ, 4 ಜಾಗ್ವಾರ್, 4 ಪೂಮಾ, 3 ಚಿಂಪಾಂಜಿ ಮತ್ತು 8 ಕ್ಯಾಪುಚಿನ್ ಕೋತಿಗಳು ಆಗಮಿಸಿವೆ. ಇದಕ್ಕೆ ಬದಲಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ 1 ಗಂಡು ಮತ್ತು 3 ಹೆಣ್ಣು ಆನೆಗಳ ವಿನಿಮಯ ಮಾಡಿಕೊಳ್ಳಲಿದ್ದು, ಸುರೇಶ್ (8), ಗೌರಿ ( 9 ), ಶ್ರುತಿ(7) ತುಳಸಿ (5) ಆನೆಗಳು ಜಪಾನ್ ಗೆ ತೆರಳಲಿವೆ.
ಜಪಾನ್ ದೇಶದ ಒಸಾಕಾ ಕಾನ್ಸೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಜಪಡೆ ರವಾನೆ ಆಗಲಿದೆ. ಕತಾರ್ ಏರ್ವೇಸ್ ನ ಸರಕು ವಿಮಾನ B777-200F ವಿಮಾನದಲ್ಲಿ ಆನೆಗಳನ್ನು ರವಾನಿಸಲಾಗುತ್ತಿದ್ದು, ಸುಮಾರು 20 ಗಂಟೆಗಳ ಪ್ರಯಾಣಕ್ಕೆ ಸಿದ್ದತೆ ಮಾಡಲಾಗಿದೆ.
ಈಗಾಗಲೇ, ಆನೆಗಳಿಗೆ ವಿಮಾನ ಪ್ರಯಾಣಕ್ಕೆ ತರಬೇತಿ ಕೊಟ್ಟಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಬ್ಬರು ಪಶುವೈದ್ಯಕೀಯ ಅಧಿಕಾರಿಗಳು, ನಾಲ್ವರು ಪಾಲಕರು, ಒಬ್ಬ ಮೇಲ್ವಿಚಾರಕ ಮತ್ತು ಒಬ್ಬ ಜೀವಶಾಸ್ತ್ರಜ್ಞೆ ಪ್ರಾಣಿಗಳೊಂದಿಗೆ ಪ್ರಯಾಣ ಮಾಡಲಿದ್ದಾರೆ.
ಹೊಸ ಪರಿಸರಕ್ಕೆ ಒಗ್ಗಿಕೊಳ್ಳಲು ಆನೆಗಳಿಗೆ ತರಬೇತಿ ನೀಡಲು ಪ್ರಾಣಿಗಳ ಜೊತೆ ಪ್ರಯಾಣಿಸಲಿರುವ ನಾಲ್ವರು ಪಾಲಕರು, ಒಬ್ಬ ಮೇಲ್ವಿಚಾರಕ ಎರಡು ವಾರಗಳ ಕಾಲ ಹಿಮೇಜಿ ಪಾರ್ಕ್ ನ ಸಿಬ್ಬಂದಿಯೊಂದಿಗೆ ಆನೆಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.