ಬೆಂಗಳೂರು: ಇಲ್ಲಿನ ಫ್ರೀಡಂ ಪಾರ್ಕ್ ನಲ್ಲಿ ಹೆಚ್ಚಿನ ವೇತನಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಪ್ರತಿಭಟನೆ ಹತ್ತಿಕ್ಕುವ ಕಾರ್ಯ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಮುಷ್ಕರದಲ್ಲಿ ಭಾಗವಹಿಸಿದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸರ್ಕಾರ ನೋಟಿಸ್ ನೀಡುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಪ್ರತಿ ಜಿಲ್ಲೆಯ ಸಂಘದ ಅಧ್ಯಕ್ಷರಿಗೆ ನೋಟಿಸ್ ನೀಡುವ ಮೂಲಕ ಸರ್ಕಾರ ಎಚ್ಚರಿಕೆ ನೀಡಿದೆ. ನಾಳೆ ಅಂಗನವಾಡಿ ಕೇಂದ್ರ ತೆರೆಯದಿದ್ದಲ್ಲಿ ಶಾಲಾ ಶಿಕ್ಷಕರಿಂದ ಹಾಗೂ ಬಿಸಿ ಊಟದ ಸಿಬ್ಬಂದಿಯಿಂದ ಸೇವೆ ಮುಂದುವರೆಸಲಾಗುವುದು. ಅಲ್ಲದೇ, ಪರ್ಯಾಯ ವ್ಯವಸ್ಥೆ ಮಾಡಿ ಕಾರ್ಯಕರ್ತೆಯರ ಮೇಲೆ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಈ ಮೂಲಕ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ ತಡೆಯಲು ಸರ್ಕಾರ ನೋಟಿಸ್ ನ ಮೊರೆ ಹೋಗಿದೆ. ನಾಳೆ ಅಂಗನವಾಡಿ ಕೇಂದ್ರಗಳನ್ನ ಪುನರ್ ಆರಂಭಿಸದಿದ್ದಲ್ಲಿ ಶಿಸ್ತು ಕ್ರಮದ ಎಚ್ಚರಿಕೆ ನೀಡುವ ಮೂಲಕ ಹೋರಾಟ ಹತ್ತಿಕ್ಕುತ್ತಿದೆ.