ನವದೆಹಲಿ: ವೈಎಸ್ಆರ್ ಕಾಂಗ್ರೆಸ್ ಮುಖಂಡ ಜಗನ್ ಮೋಹನ್ ರೆಡ್ಡಿ(Jagan Reddy) ಅವರು ತಾವು ಆಂಧ್ರಪ್ರದೇಶದ ಸದ್ದಾಂ ಹುಸೇನ್ ಎಂದೂ, 30 ವರ್ಷಗಳ ಕಾಲ ತಾನೇ ಅಧಿಕಾರದಲ್ಲಿ ಇರುತ್ತೇನೆ ಎಂದೂ ಭಾವಿಸಿದ್ದರು ಎಂದು ಟಿಡಿಪಿ ಮುಖಂಡ, ಸಚಿವ ನಾರಾ ಲೋಕೇಶ್ ವ್ಯಂಗ್ಯವಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ರುಷಿಕೊಂಡ ಹಿಲ್ಸ್ ನಲ್ಲಿನ ಐಷಾರಾಮಿ ಬಂಗಲೆಯ ವಿವಾದಕ್ಕೆ ಸಂಬಂಧಿಸಿ ಮಾತನಾಡುವ ವೇಳೆ ನಾರಾ ಲೋಕೇಶ್ ಈ ಹೇಳಿಕೆ ನೀಡಿದ್ದಾರೆ,
“ಇದನ್ನು ‘ಶೀಶ್ ಮಹಲ್’ ಆಗಿ ಪರಿವರ್ತಿಸುವ ಮೊದಲು ಇದು ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಯೋಜನೆಯಾಗಿತ್ತು. ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಆಂಧ್ರಪ್ರದೇಶದ ‘ಸದ್ದಾಂ ಹುಸೇನ್’, ಅವರು 30 ವರ್ಷಗಳ ಕಾಲ ಅಧಿಕಾರದಲ್ಲಿ ಇರುವುದಾಗಿ ಭಾವಿಸಿದ್ದರು. ನನ್ನ ಅಜ್ಜ ಮುಖ್ಯಮಂತ್ರಿಯಾಗಿದ್ದರು, ನನ್ನ ತಂದೆ ಮುಖ್ಯಮಂತ್ರಿಯಾಗಿದ್ದರು, ಆದರೆ ನಾನೆಂದೂ ಇಷ್ಟೊಂದು ದೊಡ್ಡ ಕೋಣೆಗಳನ್ನು ನೋಡಿಲ್ಲ ಎಂದು ನಾರಾ ಲೋಕೇಶ್ ಹೇಳಿದ್ದಾರೆ.
ಇರಾಕ್ ನ ಸರ್ವಾಧಿಕಾರಿಯಾಗಿದ್ದ ಸದ್ದಾಂ ಹುಸೇನ್ 1979ರಿಂದ 2003ರವರೆಗೆ ದೇಶವನ್ನು ಆಳಿದ್ದರು. ಅವರ ಆಡಳಿತವನ್ನು ವ್ಯಾಪಕವಾಗಿ ನಿರಂಕುಶ ಪ್ರಭುತ್ವವೆಂದು ನೋಡಲಾಗುತ್ತದೆ. ಸಾಮೂಹಿಕ ಹತ್ಯೆಗಳು ಮತ್ತು ಇತರ ಹಲವಾರು ದಬ್ಬಾಳಿಕೆಯ ಕೃತ್ಯಗಳೂ ಅವರ ಅವಧಿಯಲ್ಲಿ ನಡೆದಿತ್ತು ಎಂಬ ಆರೋಪವಿದೆ.
ಈಗ ಜಗನ್ ರೆಡ್ಡಿ ಅವರನ್ನು ಸದ್ದಾಂ ಹುಸೇನ್ ಗೆ ಹೋಲಿಸಿ ಮಾತನಾಡಿರುವ ನಾರಾ ಲೋಕೇಶ್, “ಜಗನ್ ರೆಡ್ಡಿಗೆ ಇರುವುದು ಸಣ್ಣ ಕುಟುಂಬ.ಅವರ ಸಹೋದರಿ ಮತ್ತು ತಾಯಿಯನ್ನು ಅವರೇ ಕುಟುಂಬದಿಂದ ಹೊರಹಾಕಿದ್ದಾರೆ. ಒಂದು ಮನೆಯಲ್ಲಿ ನಾಲ್ಕು ಜನರು ವಾಸಿಸಲು 700 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಪ್ರಧಾನಮಂತ್ರಿಗೆ ಕೂಡ ಇಷ್ಟು ದೊಡ್ಡ ಮನೆ ಇಲ್ಲ” ಎಂದು ಕಿಡಿಕಾರಿದ್ದಾರೆ. ಜೊತೆಗೆ ಈ ಅರಮನೆಯಂಥ ಮನೆಯನ್ನು ಮುಂದೇನು ಮಾಡಬೇಕೆಂದು ಟಿಡಿಪಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದೂ ಅವರು ತಿಳಿಸಿದ್ದಾರೆ.
ಕಳೆದ ವರ್ಷ ಆಂಧ್ರಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಟಿಡಿಪಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಮರಳಿದ ನಂತರ, ಚಂದ್ರಬಾಬು ನಾಯ್ಡು ಸರ್ಕಾರವು ಹಿಂದಿನ ಆಡಳಿತವು ಸಾರ್ವಜನಿಕ ಹಣವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸುತ್ತಾ ಬಂದಿದೆ.
ಜಗನ್ ರೆಡ್ಡಿ ಅವರ ಅಧಿಕಾರಾವಧಿಯಲ್ಲಿ ನಿರ್ಮಿಸಲಾದ ಬಂಗಲೆಯು ಭಾರೀ ಗಮನ ಸೆಳೆದಿತ್ತು. ಜತೆಗೆ ವಿವಾದಕ್ಕೂ ಕಾರಣವಾಗಿತ್ತು. ಪ್ರಮುಖ ಪ್ರವಾಸಿ ತಾಣವಾದ ಸುಂದರವಾದ ರುಷಿಕೊಂಡ ಬೆಟ್ಟದಲ್ಲಿ 10 ಎಕರೆ ಪ್ರದೇಶದಲ್ಲಿ ಈ ಬಂಗಲೆ ನಿರ್ಮಿಸಲಾಗಿದ್ದು, ಇದರ ಆವರಣವು ನಾಲ್ಕು ಬ್ಲಾಕ್ ಗಳನ್ನು ಒಳಗೊಂಡಿದೆ. ಸಂಕೀರ್ಣದ ಒಳಗೆ ಅತಿರಂಜಿತ ಒಳಾಂಗಣ, ಇಟಾಲಿಯನ್ ಫ್ಲೋರಿಂಗ್ ಮತ್ತು ಐಷಾರಾಮಿ ಪೀಠೋಪಕರಣಗಳನ್ನು ಅಳವಡಿಸಲಾಗಿದೆ.