ಬೆಂಗಳೂರು: ಪತ್ನಿ ಕೊಲೆ ಮಾಡಿ ಪರಾರಿಯಾಗಿದ್ದ ಪತಿಯನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಂಡ ಲೋಕೇಶ್ ಕುಮಾರ್ ಬಂಧಿತ ಆರೋಪಿ. ಕಳೆದ 24ರಂದು ಈ ಘಟನೆ ನಡೆದಿತ್ತು. ಪತಿ ಲೋಕೇಶ್ ಕತ್ತು ಹಿಸುಕಿ ಪತ್ನಿ ನಮಿತಾ ಎಂಬುವವರನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಈ ಕುರಿತು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಲೋಕೇಶ್ ಕುಮಾರ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಮಗು ನೋಡಿಕೊಳ್ಳುವ ವಿಚಾರವಾಗಿ ಗಲಾಟೆ ನಡೆದಿದೆ ಎಂದು ಲೋಕೇಶ್ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಉತ್ತರ ಪ್ರದೇಶದ ತಾಯಿ ಮನೆಗೆ ಮಗಳನ್ನು ಕಳುಹಿಸುವುದಾಗಿ ಪತ್ನಿ ಹೇಳಿದ್ದರು. ನಾನು ಬೇಡ ಅಂದಿದ್ದೆ. ಈ ವಿಷಯವಾಗಿ ಜಗಳ ನಡೆದಿತ್ತು. ಕೋಪದಲ್ಲಿ ಪತ್ನಿಗೆ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಪ್ಪು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ರಾಜಸ್ಥಾನ ಮೂಲದ ಲೋಕೇಶ್ ಕುಮಾರ್ ಚಿಕ್ಕಪೇಟೆಯಲ್ಲಿ ಟೀ ಶಾಪ್ ಇಟ್ಟುಕೊಂಡಿದ್ದ. ಉತ್ತರ ಪ್ರದೇಶ ಮೂಲದ ನಮಿತಾಳನ್ನು ಮ್ಯಾಟ್ರಿಮೋನಿ ಮೂಲಕ ಮದುವೆಯಾಗಿದ್ದ.
ಅಂತರ್ ಜಾತಿ ಇದ್ದರೂ ಇಬ್ಬರು ಬದುಕು ಕಟ್ಟಿಕೊಂಡಿದ್ದರು. ಕಳೆದ ಐದು ವರ್ಷಗಳ ಹಿಂದೆ ಇಬ್ಬರೂ ಮದುವೆಯಾಗಿದ್ದರು. ದಂಪತಿಗೆ ಮೂರು ವರ್ಷದ ಗಂಡು ಮಗು ಇದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.