ರಾಯಚೂರು: ಬಿರಿಯಾನಿ ತಿಂದು ನಕಲಿ ನೋಟು ಕೊಟ್ಟವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಬಿರಿಯಾನಿ ತಿಂದು 500 ರೂ. ನಕಲಿ ನೋಟು ಕೊಟ್ಟಿದ್ದ ಮಂಜುನಾಥ ಹಾಗೂ ರಮೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ರಾಯಚೂರು (Raichur) ನಗರದ ಬಿರಿಯಾನಿ ಹೋಟೆಲ್ ನಲ್ಲಿ ಚಿಕನ್ ಬಿರಿಯಾನಿ ತಿಂದು 500 ರೂ. ಬಿಲ್ ಪಾವತಿಸಿದ್ದರು. ಹೋಟೆಲ್ ಮಾಲೀಕನಿಗೆ ಅನುಮಾನ ಬಂದು ಪರಿಶೀಲಿಸಿದಾಗ ಅದು ನಕಲಿ ನೋಟು ಎಂಬುವುದು ಗೊತ್ತಾಗಿದೆ.
ಮನರಂಜನೆಗಾಗಿ ಬಳಸುವ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದಿಸಿದ್ದ ನಕಲಿ ನೋಟನ್ನು ಆರೋಪಿಗಳು ಕೊಟ್ಟಿದ್ದಾರೆ. ಕೂಡಲೇ ಹೋಟೆಲ್ ಮಾಲೀಕ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗುತ್ತಿದ್ದು, ಆತಂಕ ವ್ಯಕ್ತವಾಗುತ್ತಿದೆ.