ಹಾವೇರಿ: ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಮಾರನೇ ದಿನವೇ ಕ್ಷೇತ್ರದಲ್ಲಿ ಬ್ಯಾಲೆಟ್ ಬಾಕ್ಸ್ ಗಳು ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ನಗರ ಪೊಲೀಸರು ಕಾರ್ಯಚರಣೆ ನಡೆಸಿ, ಸಂತೋಷ ಮಾಳಗಿ, ಗಣೇಶ ಹರಿಜನ, ಮುತ್ತಪ್ಪ ದೇವಿಹೊಸೂರು, ಕೃಷ್ಣ ಹರಿಜನ ಮತ್ತು ಮಹ್ಮದ್ ಜಾವಿದ್ ಎಂಬುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 27 ಬ್ಯಾಲೆಟ್ ಬಾಕ್ಸ್, ಕೃತ್ಯಕ್ಕೆ ಬಳಿಸಿದ 1 ಆಟೋ ಜಪ್ತಿ ಮಾಡಲಾಗಿದೆ.
ಹಾವೇರಿ ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದ ಹತ್ತಿರದ ಕಾಲುವೆಯಲ್ಲಿ ಹಳೆಯ ಬ್ಯಾಲೆಟ್ ಬಾಕ್ಸ್ ಸಿಕ್ಕಿದ್ದರಿಂದ ಆತಂಕ ಹಾಗೂ ಅನುಮಾನ ವ್ಯಕ್ತವಾಗಿತ್ತು. ಆರೋಪಿಗಳು ಎಪಿಎಂಸಿ ಗೋಡೌನ್ನ ಬೀಗ ಮುರಿದು ಕಳ್ಳತನ ಮಾಡಿದ್ದರು ಎನ್ನಲಾಗಿದೆ.
ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ ಮುಗಿದ ಒಂದು ದಿನದ ಬೆನ್ನೆಲ್ಲೇ ಈ ಘಟನೆ ನಡೆದಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಶಿಗ್ಗಾಂವಿ ಉಪಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ಈಗಾಗಲೇ ಹೇಳಿದ್ದಾರೆ.