ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಯಾದ ಡೆಮಾಕ್ರಟಿಕ್ ಪಕ್ಷದ ಜೊಹ್ರಾನ್ ಮಮ್ದಾನಿ, ತಮ್ಮ ಗೆಲುವಿನ ಭಾಷಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಟ್ರಂಪ್, “ಹಾಗಾದರೆ ಆಟ ಈಗ ಶುರುವಾಗಿದೆ…” ಎಂದು ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ, ಮುಂಬರುವ ದಿನಗಳಲ್ಲಿ ನಡೆಯಬಹುದಾದ ರಾಜಕೀಯ ಸಂಘರ್ಷದ ಮುನ್ಸೂಚನೆ ನೀಡಿದ್ದಾರೆ.
ಟ್ರಂಪ್‌ಗೆ ಮಮ್ದಾನಿ ಖಡಕ್ ಸಂದೇಶ
ಗೆಲುವಿನ ನಂತರ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಜೊಹ್ರಾನ್ ಮಮ್ದಾನಿ, ಅಧ್ಯಕ್ಷ ಟ್ರಂಪ್‌ರನ್ನು ನೇರವಾಗಿ ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ. “ಡೊನಾಲ್ಡ್ ಟ್ರಂಪ್, ನೀವು ಈ ಕಾರ್ಯಕ್ರಮವನ್ನು ನೋಡುತ್ತಿದ್ದೀರಿ ಎಂದು ನನಗೆ ತಿಳಿದಿದೆ. ನಿಮಗಾಗಿ ನನ್ನ ಬಳಿ ನಾಲ್ಕು ಶಬ್ದಗಳಿವೆ: ಧ್ವನಿ ಏರಿಸಿ ಕೇಳಿಸಿಕೊಳ್ಳಿ. ನಮ್ಮಲ್ಲಿ ಯಾರಿಗಾದರೂ ತೊಂದರೆ ನೀಡಬೇಕೆಂದರೆ, ನೀವು ನಮ್ಮೆಲ್ಲರನ್ನೂ ದಾಟಿ ಬರಬೇಕಾಗುತ್ತದೆ,” ಎಂದು ಸವಾಲು ಹಾಕಿದರು.
ಅಷ್ಟಕ್ಕೇ ನಿಲ್ಲಿಸದ ಅವರು, “ಡೊನಾಲ್ಡ್ ಟ್ರಂಪ್‌ರಿಂದ ವಂಚನೆಗೆ ಒಳಗಾದ ದೇಶಕ್ಕೆ ಅವರನ್ನು ಹೇಗೆ ಸೋಲಿಸಬಹುದು ಎಂದು ಯಾರಾದರೂ ತೋರಿಸುವುದಾದರೆ, ಅದು ಅವರಿಗೆ ಜನ್ಮ ನೀಡಿದ ನ್ಯೂಯಾರ್ಕ್ ನಗರವೇ ಆಗಿದೆ. ಇದು ಕೇವಲ ಟ್ರಂಪ್ ಅವರನ್ನು ಮಾತ್ರವಲ್ಲ, ಮುಂದಿನ ಟ್ರಂಪ್‌ಗಳನ್ನೂ ತಡೆಯುವ ದಾರಿ,” ಎಂದು ಗುಡುಗಿದರು.
ಮಮ್ದಾನಿ ಗೆಲುವಿಗೆ ಟ್ರಂಪ್ ಮತ್ತು ರಿಪಬ್ಲಿಕನ್ನರ ಪ್ರತಿಕ್ರಿಯೆ
ಮಮ್ದಾನಿ ಅವರ ಭಾಷಣ ಮುಗಿಯುತ್ತಿದ್ದಂತೆಯೇ ಟ್ರಂಪ್ ತಮ್ಮ ಟ್ರುಥ್ ಸೋಷಿಯಲ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೂ ಮುನ್ನ, ರಿಪಬ್ಲಿಕನ್ ಪಕ್ಷದ ಸೋಲಿಗೆ ಕಾರಣ ವಿವರಿಸಿದ ಅವರು, “ಚುನಾವಣಾ ಸಮೀಕ್ಷೆಗಳ ಪ್ರಕಾರ, ‘ಮತಪತ್ರದಲ್ಲಿ ಟ್ರಂಪ್ ಹೆಸರು ಇರಲಿಲ್ಲ ಮತ್ತು ನಮ್ಮ ಸರ್ಕಾರದ ಶಟ್ ಡೌನ್’—ಈ ಎರಡು ಕಾರಣಗಳಿಂದ ರಿಪಬ್ಲಿಕನ್ನರು ಚುನಾವಣೆಯಲ್ಲಿ ಸೋತಿದ್ದಾರೆ,” ಎಂದು ಪೋಸ್ಟ್ ಮಾಡಿದ್ದರು.
ಮಮ್ದಾನಿ ಅವರ ಗೆಲುವಿಗೆ ಇತರ ರಿಪಬ್ಲಿಕನ್ ನಾಯಕರಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಯುಎಸ್ ಹೌಸ್ ಸ್ಪೀಕರ್ ಮೈಕ್ ಜಾನ್ಸನ್, “ನ್ಯೂಯಾರ್ಕ್ ನಗರದ ಡೆಮಾಕ್ರಾಟ್‌ಗಳು ಒಬ್ಬ ನಿಜವಾದ ಉಗ್ರಗಾಮಿ ಮತ್ತು ಮಾರ್ಕ್ಸ್‌ವಾದಿಯನ್ನು ಆಯ್ಕೆ ಮಾಡಿದ್ದಾರೆ. ಇದರ ಪರಿಣಾಮವನ್ನು ಇಡೀ ದೇಶ ಅನುಭವಿಸಲಿದೆ. ಮಮ್ದಾನಿ ಅವರ ಆಯ್ಕೆಯು ಡೆಮಾಕ್ರಟಿಕ್ ಪಕ್ಷವು ಮೂಲಭೂತವಾದಿಯಾಗಿ ರೂಪಾಂತರಗೊಂಡಿರುವುದನ್ನು ಖಚಿತಪಡಿಸಿದೆ,” ಎಂದು ಹೇಳಿದ್ದಾರೆ.
ರಾಷ್ಟ್ರೀಯ ರಿಪಬ್ಲಿಕನ್ ಕಾಂಗ್ರೆಷನಲ್ ಸಮಿತಿಯ ವಕ್ತಾರ ಮೈಕ್ ಮಾರಿನೆಲ್ಲಾ, “ಡೆಮಾಕ್ರಟಿಕ್ ಪಕ್ಷವು ಒಬ್ಬ ತೀವ್ರವಾದಿಯ ಕೈಗೆ ನಿಯಂತ್ರಣವನ್ನು ಬಿಟ್ಟುಕೊಟ್ಟಿದೆ. 2026ರಲ್ಲಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ,” ಎಂದು ಕಿಡಿಕಾರಿದ್ದಾರೆ.
ಮಂಗಳವಾರ ನಡೆದ ಚುನಾವಣೆಯಲ್ಲಿ 34 ವರ್ಷದ ಮಮ್ದಾನಿ, ಮಾಜಿ ಗವರ್ನರ್ ಆಂಡ್ರ್ಯೂ ಕ್ಯೂಮೊ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ, ನ್ಯೂಯಾರ್ಕ್‌ನ ಅತ್ಯಂತ ಕಿರಿಯ ಮತ್ತು ಮೊದಲ ಮುಸ್ಲಿಂ ಮೇಯರ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. ಸುಮಾರು ಶೇ.90 ಮತ ಎಣಿಕೆಯಾದಾಗ, ಮಮ್ದಾನಿ ಅವರು ಕ್ಯೂಮೊ ಅವರಿಗಿಂತ ಸರಿಸುಮಾರು ಶೇ.9 ಮುನ್ನಡೆ ಕಾಯ್ದುಕೊಂಡಿದ್ದರು. 50 ವರ್ಷಗಳಲ್ಲೇ ಅತಿ ಹೆಚ್ಚು ಅಂದರೆ, 2 ದಶಲಕ್ಷಕ್ಕೂ ಹೆಚ್ಚು ನ್ಯೂಯಾರ್ಕ್ ನಿವಾಸಿಗಳು ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು.
ಇದನ್ನೂ ಓದಿ: EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 70 ಕೋಟಿ ರೂ. ವಂಚನೆ | CEO ಸೇರಿ ಇಬ್ಬರು ಆರೋಪಿಗಳ ಬಂಧನ!



















