ಕೋಲಾರ: ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಹತ್ಯೆ (Ananda Marga Swamiji Case) ಪ್ರಕರಣಕ್ಕೆ ಸಂಬಂಧಿಸಿದಂತೆ ಆಶ್ರಮದ ಮತ್ತಿಬ್ಬರು ಸ್ವಾಮೀಜಿಗಳು ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಕೋಲಾರ ಜಿಲ್ಲೆಯ ಮಾಲೂರು (Malur) ತಾಲ್ಲೂಕಿನ ಮೈಲಾಂಡಹಳ್ಳಿ ಬಳಿಯ ಆನಂದ ಮಾರ್ಗ ಆಶ್ರಮದ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ (70) ಆಶ್ರಮದಲ್ಲಿಯೇ (Ananda Marga Mutt) ಬರ್ಬರವಾಗಿ ಶನಿವಾರ ಹತ್ಯೆಯಾಗಿದ್ದರು. ಸದ್ಯ ಪೊಲೀಸರು ಆಶ್ರಮದ ಇಬ್ಬರು ಸ್ವಾಮೀಜಿಗಳು ಮತ್ತು ಮಾಜಿ ಸಿಬ್ಬಂದಿ ಸೇರಿದಂತೆ ಮೂವರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ.

ಆಶ್ರಮದ ಆಚಾರ್ಯ ಧರ್ಮ ಪ್ರಾಣಾನಂದ ಸ್ವಾಮೀಜಿ (45), ಪ್ರಾಣೇಶ್ವರಾನಂದ ಸ್ವಾಮೀಜಿ (48) ಹಾಗೂ ಆಶ್ರಮದ ಮಾಜಿ ಸಿಬ್ಬಂದಿ ಅರುಣ್ ಕುಮಾರ್ (55) ಬಂಧಿತ ಆರೋಪಿಗಳು. ಮತ್ತಿಬ್ಬರು ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.
ಜಮೀನು ವಿಚಾರವಾಗಿ ಆಶ್ರಮದ ಎರಡು ಗುಂಪುಗಳ ನಡುವೆ ಅನೇಕ ವರ್ಷಗಳಿಂದ ವಿವಾದ ನಡೆಯುತ್ತಿತ್ತು. ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಶೌಚಾಲಯಕ್ಕೆ ತೆರಳಿದ್ದ ಸ್ವಾಮೀಜಿ ಅವರನ್ನ ಆರೋಪಿಗಳು ಹೊರಗೆ ಎಳೆದು ತಂದಿದ್ದಾರೆ. ಬಳಿಕ ಮುಖಕ್ಕೆ ಸ್ಪ್ರೆ ಸಿಂಪಡಿಸಿ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಆಸ್ತಿ ಹಾಗೂ ಅಧಿಕಾರಕ್ಕಾಗಿ ಈ ಘಟನೆ ನಡೆದಿದೆ. ಕಿತ್ತಂಡೂರು ಗ್ರಾಮದ ಆನಂದ ಮಾರ್ಗ ಆಶ್ರಮದಲ್ಲಿಂದು ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
