ಚಿಕ್ಕಬಳ್ಳಾಪುರ: ದ್ವೇಷದ ಹಿನ್ನೆಲೆಯಲ್ಲಿ ಚಿಕ್ಕಪ್ಪನೊಬ್ಬ ತನ್ನ ಅಣ್ಣನ ಮಗನನ್ನೇ ಕೊಲೆ ಮಾಡಿ, ಸಹೋದರನ ಮೇಲೆ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದೆ.
ಪಿಸ್ತೂಲ್ನಿಂದ ಗುಂಡು ಹಾರಿಸಿ ಅಣ್ಣನ ಮಗನನ್ನು ಕೊಲೆ ಮಾಡಿದ್ದಾನೆ.ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ನಡೆದಿದೆ. ನಜೀರ್ ಅಹ್ಮದ್ ಕೊಲೆಯಾಗಿರುವ ದುರ್ದೈವಿ. ಬಶೀರ್ ಅಹ್ಮದ್ (66) ಗುಂಡು ಹಾರಿಸಿ ಕೊಲೆ ಮಾಡಿರುವ ಆರೋಪಿ. ಅಣ್ಣ ಮಾಬೂಸಾಬಿ ಮೇಲೆಯೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಾಬೂಸಾಬಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಬಶೀರ್ ಅಹ್ಮದ್ ಸೌದಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗಷ್ಟೇ ಊರಿಗೆ ಬಂದಿದ್ದ ಎನ್ನಲಾಗಿದೆ. ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು, ಬಶೀರ್ ಅಹ್ಮದ್ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.


















