ಬೆಂಗಳೂರು: ರಸ್ತೆಯಲ್ಲಿ ಗುಟ್ಕಾ ಉಗಿಯುವುದು, ಕಸ ಎಸೆಯುವ ವಿಚಾರಕ್ಕೆ ಶುರುವಾದ ಗಲಾಟೆಯಲ್ಲಿ ಯುವಕನೊಬ್ಬ ವೃದ್ಧನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ (Madanayakanahalli) ಈ ಘಟನೆ ನಡೆದಿದೆ. ಸಿದ್ದಪ್ಪ(70) ಹತ್ಯೆಯಾದ ವೃದ್ದ. ತುಮಕೂರು ಜಿಲ್ಲೆಯ ಶಿರಾದ ಪುನೀತ್(24) ಕೊಲೆ ಮಾಡಿರುವ ಆರೋಪಿ. ಈತ ಕಸ ತುಂಬಿದ ಕವರ್ ನ್ನು ಎಸೆದು, ರಸ್ತೆಯಲ್ಲೇ ಗುಟ್ಕಾ ಉಗಿದು ಹೋಗುತ್ತಿದ್ದ. ಹೀಗಾಗಿ ವೃದ್ಧ ವ್ಯಕ್ತಿ ಆತನಿಗೆ ಬೈದಿದ್ದಾರೆ.
ಇದಕ್ಕೆ ಕೋಪಗೊಂಡ ಯುವಕ, ಮನೆಯಿಂದ ಮಚ್ಚು ತಂದು ವೃದ್ದನ ಕುತ್ತಿಗೆ ಕಡಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ತನ್ನ ತಾಯಿಯೊಂದಿಗೆ ಚಿಕ್ಕಬಿದರಕಲ್ಲಿನಲ್ಲಿರುವ ತನ್ನ ಅಣ್ಣನ ಮನೆಯಲ್ಲಿ ತಲೆಮರೆಸಿಕೊಳ್ಳುವಾಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೃತ ವೃದ್ದ ಸಿದ್ದಪ್ಪ ಕಳೆದ 10 ವರ್ಷಗಳ ಹಿಂದೆ ಪ್ರತಿಷ್ಠಿತ ಹಿಮಾಲಯ ಡ್ರಗ್ಸ್ ಕಂಪನಿಯಿಂದ ನಿವೃತ್ತಿ ಹೊಂದಿದ್ದರು. ತಮ್ಮ ಬಳಿಯಿದ್ದ ಸುಮಾರು 10ರಿಂದ 15 ಮನೆಯನ್ನು ಬಾಡಿಗೆ ಕೊಟ್ಟು, ನಿವೃತ್ತಿ ಜೀವನ ಸಾಗಿಸುತ್ತಿದ್ದರು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.