ಬೆಂಗಳೂರು: ಇತ್ತೀಚೆಗಷ್ಟೇ ಮುಂಬಯಿನಲ್ಲಿ ಹೋರ್ಡಿಂಗ್ಸ್ ಬಿದ್ದ (Mumbai Hoarding Collapse) ಪರಿಣಾಮ ಹಲವು ಜನರು ಸಾವನ್ನಪ್ಪಿದ್ದರು. ಈ ಘಟನೆ ಇಡೀ ದೇಶದಲ್ಲಿಯೇ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಬಿಬಿಎಂಪಿ ಮಾತ್ರ ಈ ಘಟನೆಯಿಂದ ಎಚ್ಚೆತ್ತುಕೊಂಡಂತೆ ಕಂಡಿಲ್ಲ. ಹೀಗಾಗಿ ನಗರದಲ್ಲಿ ಇಂತಹ ಘಟನೆಯೊಂದು ನಡೆದಿದೆ.
ಅನಧಿಕೃತ ಫ್ಲೆಕ್ಸ್ ವೊಂದು ವೃದ್ಧ ವ್ಯಕ್ತಿಯೊಬ್ಬರ ತಲೆಯ ಮೇಲೆ ಬಿದ್ದ ಪರಿಣಾಮ ಅವರ ಸ್ಥಿತಿ ಗಂಭೀರವಾಗಿದೆ. 70 ವರ್ಷದ ಭಕ್ತವತ್ಸಲ ಎಂಬ ವೃದ್ಧ ಕೋಮಾಗೆ ಜಾರಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ರಾಜಾನುಕುಂಟೆಯ ನಿವಾಸಿಯಾಗಿರುವ ಭಕ್ತವತ್ಸಲ ಎಂಬುವವರೇ ಕೋಮಾಗೆ ತಲುಪಿದ್ದಾರೆ. ಅವರು ಮೊಮ್ಮಗಳನ್ನು ಶಾಲೆಯಿಂದ ಕರೆದುಕೊಂಡು ಬರಲು ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಫ್ಲೆಕ್ಸ್ ತಲೆ ಮೇಲೆ ಬಿದ್ದಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿದ್ದು ಕೋಮಾಗೆ ಜಾರಿದ್ದಾರೆ. ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹುಟ್ಟು ಹಬ್ಬಕ್ಕೆ ಶುಭ ಕೋರಿ ಹಾಕಿದ್ದ ಬೃಹತ್ ಗಾತ್ರದ ಫ್ಲೆಕ್ಸ್ ಇದಾಗಿತ್ತು ಎನ್ನಲಾಗಿದೆ.