ಬೆಳಗಾವಿ: ಇಂದಿನಿಂದ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯವಾಗುತ್ತದೆ ಎಂದು ಜನರು ನಂಬಿದ್ದಾರೆ. ಹೀಗಾಗಿ ಅಧಿವೇಶನದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸುವರ್ಣಸೌಧದಲ್ಲಿ ವಿಶ್ವಗುರು ಬಸವಣ್ಣ ಸ್ಥಾಪಿಸಿದ ‘ಅನುಭವ ಮಂಟಪ’ದ ಬೃಹತ್ ತೈಲವರ್ಣ ಚಿತ್ರದ ಅನಾವರಣವಾಗಲಿದೆ.
12ನೇ ಶತಮಾನದಲ್ಲಿ ಬಸವ ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ‘ಅನುಭವ ಮಂಟಪ’ ನಿರ್ಮಿಸಲಾಗಿತ್ತು. ಆ ಅನುಭವ ಮಂಟಪ ಚಿತ್ರವನ್ನು ನಾಳೆಯಿಂದ ಸುವರ್ಣಸೌಧದಲ್ಲಿ ನೋಡಬಹುದು. ಸೌಧದ ಮೊದಲ ಮಹಡಿಯಲ್ಲಿ ‘ಅನುಭವ ಮಂಟಪ’ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಕ್ಯಾನ್ವಾಸ್ ಮೇಲೆ ತೈಲ ಮಾಧ್ಯಮದ ಮೂಲಕ ರಚಿಸಲ್ಪಟ್ಟ 20 ಅಡಿ ಉದ್ದ ಮತ್ತು 10 ಅಡಿ ಅಗಲದ ಅನುಭವ ಮಂಟಪದ ವಿಶೇಷ ಚಿತ್ರ ಅನಾವರಣಗೊಳ್ಳಲಿದೆ. ಕ್ಯಾನ್ವಾಸ್ ಮೇಲೆ ಅನುಭವ ಮಂಟಪ ಚಿತ್ರ ಬಿಡಿಸಲಾಗಿದೆ. 7 ಜನ ಕಲಾವಿದರು 25 ದಿನಗಳ ಕಾಲ ಕೆಲಸ ಮಾಡಿದ್ದಾರೆ. ಚಿತ್ರವು ಅದ್ಭುತವಾಗಿ ಮೂಡಿ ಬಂದಿದೆ.