ಮುದ್ದೇಬಿಹಾಳ: ಆಕಳು ಕೆಚ್ಚಲು ಹಾಗೂ ಬಾಲ ಕತ್ತರಿಸಿರುವ ಪ್ರಕರಣಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಖಂಡಿಸಿ, ದುಷ್ಕೃತ್ಯದ ಹಿಂದೆ ಇರುವ ನಿಜವಾದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ರೈತ ಮೋರ್ಚ ಘಟಕದ ಸದಸ್ಯರು ಆಗ್ರಹಿಸಿ ಶಾಸಕರ ಮನೆ ಮುಂದೆ ಅನಿರೀಕ್ಷಿತ ಪ್ರತಿಭಟನೆ ನಡೆಸಿದ್ದಾರೆ.
ಶಾಸಕ ನಾಡಗೌಡ ಅವರ ನಿವಾಸದ ಕಡೆಗೆ ಧಾವಿಸುತ್ತಿದ್ದ ಪ್ರತಿಭಟನಾಕಾರರನ್ನು ತಡೆದ ಪೊಲೀಸ್ ಸಿಬ್ಬಂದಿ ಶಾಸಕರ ನಿವಾಸಕ್ಕೆ ಬಂದು ಮನವಿ ಕೊಡಲು ಅವಕಾಶವಿಲ್ಲ ಎಂದು ಹೇಳಿದರು. ಇದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಪವಿತ್ರ ಗೋವುಗಳನ್ನು ಹಿಂಸೆ ಮಾಡುವುದನ್ನು ಖಂಡಿಸಿ ನಾವು ತಹಸಿಲ್ದಾರ್ ಅವರಿಗೆ ಮನವಿ ಕೊಡಲು ಬಂದಿದ್ದೇವೆ. ಸಾರ್ವತ್ರಿಕ ರಜೆ ಇರುವ ಹಿನ್ನೆಲೆಯಲ್ಲಿ ಶಾಸಕರಿಗೆ ಮನವಿ ಕೊಡಲು ತೆರಳುತ್ತಿದ್ದೇವೆ. ರೈತರ ಜೀವನಾಡಿ ಹಸು ಕೊಲ್ಲುವುದು, ಹಿಂಸೆ ಮಾಡುವುದು ಅಮಾನವೀಯ. ಇದು ನಾಡಿನ ಸಂಸ್ಕೃತಿ ಹಾಗೂ ರೈತರ ಮೇಲಿನ ದಾಳಿ ಎಂದು ಕಿಡಿಕಾರಿದ್ದಾರೆ.
ಆದರೆ, ಈ ವೇಳೆ ಶಾಸಕರು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಗೆ ಯಾರೋ ಪ್ರಚೋದನೆ ನೀಡುತ್ತಿದ್ದಾರೆ. ಈಗಾಗಲೇ ಸರ್ಕಾರ ಅಪರಾಧಿಗಳನ್ನು ಬಂಧಿಸಿದೆ. ಪ್ರತಿಯೊಂದಕ್ಕೂ ರಾಜಕೀಯ ಮಾಡಿದರೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಖಡಕ್ ಆಗಿ ಹೇಳಿದರು.
ನಂತರ ಕೆಲವು ರೈತರನ್ನು ವಶಕ್ಕೆ ಪಡೆಯಲಾಯಿತು. ನಂತರ ಉಳಿದ ರೈತರು ಆಕ್ರೋಶಗೊಂಡು ಮನೆಯ ಮುಂದೆ ಗೋವಿನ ಸಗಣಿ ಸಾರಿಸಿ ಪ್ರತಿಭಟಿಸಿದರು.