ಬೆಂಗಳೂರು: ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕರ್ತನ ಕೈಯಲ್ಲಿ ಶೂ ಬಿಚ್ಚಿಸಿಕೊಂಡಿರುವ ಸುದ್ದಿ ಈಗ ದೊಡ್ಡ ವೈರಲ್ ಆಗಿದೆ. ಶೂ ಬಿಚ್ಚುವ ವೇಳೆ ಕಾರ್ಯಕರ್ತನು ರಾಷ್ಟ್ರ ಧ್ವಜ ಹಿಡಿದುಕೊಂಡಿದ್ದ ಎನ್ನಲಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಬೆಳಿಗ್ಗೆ ಬೆಂಗಳೂರಿನ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಶೂ ತೆಗೆಯಲು ಮುಂದಾದರು. ಆಗ ಕಾರ್ಯಕರ್ತರೊಬ್ಬರು ಬಂದು ಸಿಎಂಗೆ ಸಹಾಯ ಮಾಡಿದರು. ಈ ವೇಳೆ ಕಾರ್ಯಕರ್ತ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡಿದ್ದರು. ಕೂಡಲೇ ಸ್ಥಳದಲ್ಲಿದ್ದ ಮುಖಂಡರೊಬ್ಬರು ಗಮನಿಸಿ ಬಾವುಟವನ್ನು ಪಕ್ಕಕ್ಕೆ ಇಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ” ಗುಲಾಮಗಿರಿಯ ದವಡೆಯಿಂದ ಮುಕ್ತವಾದ ಭಾರತ, ಇಂದು ವಿಶ್ವದ ಮುಂಚೂಣಿ ರಾಷ್ಟ್ರವಾಗಿದೆ. ರಾಷ್ಟ್ರಭಕ್ತಿ, ರಾಷ್ಟ್ರಧ್ವಜ, ರಾಷ್ಟ್ರ ಭಕ್ತರು ಎಂದರೆ ಕಾಂಗ್ರೆಸ್’ಗೆ ಯಾವಾಗಲೂ ಕಾಲ ಕಸ.
ಗುಲಾಮಗಿರಿಯನ್ನು ಆರಾಧಿಸಿಕೊಂಡು ಬಂದ ಕಾಂಗ್ರೆಸ್ಸಿಗರು ರಾಷ್ಟ್ರಧ್ವಜವನ್ನು ಗಾಂಧಿ ಜಯಂತಿಯಂದೇ ಗುಲಾಮಗಿರಿಯ ಸಂಕೇತದಂತೆ ಕಾಲಕಸವಾಗಿ ಕಂಡಿರುವುದು, ಸ್ವತಃ ಮುಖ್ಯಮಂತ್ರಿಗಳು ಅದನ್ನು ಆಕ್ಷೇಪಿಸದೆ ಉತ್ತೇಜಿಸುವ ಮಾದರಿಯಲ್ಲಿ ಉಡಾಫೆ ಪ್ರದರ್ಶಿಸಿರುವುದು ರಾಷ್ಟ್ರ ಹಾಗೂ ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನವಾಗಿದೆ. ಹೀಗಾಗಿ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಭಾರತೀಯರ ಕ್ಷಮೆ ಕೇಳಲಿ ಎಂದು ಅಗ್ರಹಿಸಿದ್ದಾರೆ.