ಬೆಂಗಳೂರು: ಅಮೃತಹಳ್ಳಿ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮಹತ್ವದ ಮಾಹಿತಿ ಬಹಿರಂಗವಾಗಿದ್ದು, ಆರೋಪಿಗಳು ಪಾರ್ಟಿ ನಡೆಸಿದ್ದ ವಿಲ್ಲಾದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ತನಿಖೆ ವೇಳೆ ಗೋವಾದಿಂದ ತರಲಾಗಿದ್ದ ಮಾದಕ ವಸ್ತುಗಳಾದ ಎಕ್ಸ್‌ಟೆಸಿ ಮಾತ್ರೆಗಳು ಕಾಲೇಜು ಯುವತಿಯರಿಗೆ ನೀಡಿ, ಅವರನ್ನು ಅರೆ ಪ್ರಜ್ಞಾ ಸ್ಥಿತಿಗೆ ತಂದು ಅತ್ಯಾಚಾರ ಎಸಗಲಾಗುತ್ತಿತ್ತು ಎಂಬುದು ತಿಳಿದುಬಂದಿದೆ. ಆರೋಪಿಗಳ ವೈದ್ಯಕೀಯ ವರದಿಯಲ್ಲೂ ಡ್ರಗ್ಸ್ ಬಳಕೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ಯಾಂಗ್ ರೇಪ್ ನಡೆದ ಅಮೃತಹಳ್ಳಿಯ ವಿಲ್ಲಾದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪತ್ತೆಹಚ್ಚಿ ಡಿವಿಆರ್ ಅನ್ನು ವಶಕ್ಕೆ ಪಡೆದಿದ್ದಾರೆ. ಈ ದೃಶ್ಯಗಳಲ್ಲಿ ಆರೋಪಿಗಳು ಪಾರ್ಟಿಯಲ್ಲಿ ಇದ್ದುದು ದೃಢಪಟ್ಟಿದ್ದು, ಅವರ ಚಹರೆಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯಗಳನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ.
ಇನ್ನೂ ಈ ವಿಲ್ಲಾದಲ್ಲಿ ಎಷ್ಟು ದಿನಗಳಿಂದ ಪಾರ್ಟಿ ನಡೆಯುತ್ತಿತ್ತು, ಪಾರ್ಟಿಗೆ ಯಾರು ಯಾರು ಆಗಮಿಸುತ್ತಿದ್ದರು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಗುತ್ತಿಗೆದಾರನಾಗಿರುವ ಆರೋಪಿ ಅನಿರುದ್ಧ್ ಪಾರ್ಟಿಗೆ ಬೇಕಾದ ವೆಚ್ಚವನ್ನು ಭರಿಸಿದ್ದು, ಆತನೇ ವಿಲ್ಲಾವನ್ನು ಬುಕ್ ಮಾಡಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಇದೇ ಕಾರಣಕ್ಕೆ ಆತ ಈ ಹಿಂದೆ ಯಾವ ಯಾವ ವಿಲ್ಲಾಗಳನ್ನು ಬುಕ್ ಮಾಡಿದ್ದಾನೆ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಮಂಗಳೂರಲ್ಲಿ ಸೈಬರ್ ವಂಚಕರ ಬಂಧನ.. ಇವರ ಹಿಸ್ಟರಿಯೇ ಭಯಾನಕ!



















