ಮಂಗಳೂರು: ಪತಿಯನ್ನು ಬಿಡುಗಡೆ ಮಾಡಿಸಿಕೊಳ್ಳಲು ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಲೈಂಗಿಕ ಕಿರುಕುಳ ನೀಡಿದರೆಂಬ ಗಂಭೀರ ಆರೋಪ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಳಿಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಸಂತ್ರಸ್ತ ಮಹಿಳೆ ಆರೋಪ ಮಾಡಿದ್ದಾರೆ. ತನ್ನ ಪತಿಯನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲು ಮಹಿಳೆ ಠಾಣೆಗೆ ತೆರಳಿದ್ದಾಗ ಇನ್ಸ್‌ಪೆಕ್ಟರ್ ಅಸಭ್ಯವಾಗಿ ವರ್ತಿಸಿ, ಪತಿಯನ್ನು ಬಿಡಿಸಬೇಕಾದರೆ ಲೈಂಗಿಕವಾಗಿ ಸಹಕರಿಸಬೇಕು ಎಂದು ಒತ್ತಾಯಿಸಿದರೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇದಷ್ಟೇ ಅಲ್ಲದೆ, ಲೈಂಗಿಕವಾಗಿ ಸಹಕರಿಸಲು ಸಾಧ್ಯವಾಗದಿದ್ದರೆ 25 ಲಕ್ಷ ರೂಪಾಯಿ ನೀಡಬೇಕು. ಇಲ್ಲವಾದರೆ ಪತಿಯ ಮೇಲೆ ರೌಡಿಶೀಟ್ ತೆರೆಯುವುದಾಗಿ ಇನ್ಸ್‌ಪೆಕ್ಟರ್ ಬೆದರಿಕೆ ಹಾಕಿದರೆಂದು ಮಹಿಳೆ ಆರೋಪಿಸಿದ್ದಾರೆ.
ಇದಲ್ಲದೆ, “ಈ ಪೋಸ್ಟ್‌ಗೆ ಬರಲು ನಾನು ಗೃಹ ಸಚಿವರಿಗೆ 50 ಲಕ್ಷ ರೂಪಾಯಿ ಕೊಟ್ಟಿದ್ದೇನೆ. ಹೀಗಾಗಿ ನನ್ನ ಮಾತು ಕೇಳಲೇಬೇಕು” ಎಂದು ಹೇಳಿ ಒತ್ತಡ ಹಾಕಿದರೆಂದು ಮಹಿಳೆ ದೂರಿದ್ದಾರೆ.
ಸಂತ್ರಸ್ತೆಯ ಪ್ರಕಾರ, ಇನ್ಸ್‌ಪೆಕ್ಟರ್ ಇನ್ನೂ ಹಲವಾರು ಮಹಿಳೆಯರೊಂದಿಗೆ ಇದೇ ರೀತಿಯ ವರ್ತನೆ ನಡೆಸಿದ್ದಾಗಿ ಹೇಳಿಕೊಂಡು, “ನನ್ನ ಬಳಿ ನೂರಾರು ಮಹಿಳೆಯರು ಇದ್ದಾರೆ. ಅವರಂತೆ ನೀನು ಸಹ ಸಹಕರಿಸಬೇಕು. ಇಲ್ಲವಾದರೆ ಡ್ರಗ್ಸ್ ಪೆಡ್ಲರ್‌ಗಳಿಗೆ ಹೇಳಿ ನಿನ್ನ ಮರ್ಯಾದೆ ತೆಗೆಯಿಸುತ್ತೇನೆ” ಎಂದು ಬೆದರಿಕೆ ಹಾಕಿದರೆಂದು ಆರೋಪಿಸಲಾಗಿದೆ.
ಇದರ ಜೊತೆಗೆ, ಇನ್ಸ್‌ಪೆಕ್ಟರ್ ತನ್ನ ಮನೆಯಲ್ಲಿಯೂ ಅನಧಿಕೃತವಾಗಿ ಪ್ರವೇಶಿಸಲು ಯತ್ನಿಸಿದ್ದು, ರಾತ್ರಿ ವೇಳೆ ಮನೆ ಗೇಟ್ ಹಾರಿ ಒಳನುಗ್ಗಿ ಕಿರುಕುಳ ನೀಡಿದ ಘಟನೆಗಳೂ ನಡೆದಿವೆ ಎಂದು ಮಹಿಳೆ ಹೇಳಿದ್ದಾರೆ. ಒಪ್ಪದಿದ್ದರೆ ಪತಿ ಅಥವಾ ಸಂಬಂಧಿಕರನ್ನು ಬಂಧಿಸಿ ಕಿರುಕುಳ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಹಿಳೆಯ ಮಗಳ ಕುರಿತು ಸಹ ಅಸಭ್ಯವಾಗಿ ಮಾತನಾಡಿ, “ನಿನ್ನ ಮಗಳನ್ನು ನನ್ನ ಬಳಿಗೆ ಕಳುಹಿಸು” ಎಂದು ಹೇಳಿದರೆಂದು ಮಹಿಳೆ ಆರೋಪಿಸಿದ್ದಾರೆ. ಈ ಎಲ್ಲಾ ಆರೋಪಗಳ ಹಿನ್ನೆಲೆಯಲ್ಲಿ ಮಹಿಳೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ : ಕಾಲೇಜು ಹುಡುಗನ ಮೇಲೆ ಯುವಕರ ಗ್ಯಾಂಗ್ ಹಲ್ಲೆ



















