ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivraj Kumar) ಇತ್ತೀಚೆಗಷ್ಟೇ ಅಮೆರಿಕದಲ್ಲಿ ಕ್ಯಾನ್ಸರ್ ಗೆ ಶಸ್ತ್ರ ಚಿಕಿತ್ಸೆ ಪಡೆದು ತಾಯ್ನಾಡಿಗೆ ಮರಳಿದ್ದಾರೆ. ಈಗ ಶಿರಸಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಮಧ್ಯೆ ಗಣ್ಯರು, ಸೆಲೆಬ್ರಿಟಿಗಳು ಆರೋಗ್ಯದ ಕುರಿತು ವಿಚಾರಿಸುತ್ತಿದ್ದಾರೆ. ಆದರೆ, ಬಿಗ್ ಬಿ ಅಮಿತಾಬ್ ಬಚ್ಚನ್(Big B Amitabh Bachchan) ಪ್ರತಿ ದಿನ ಶಿವಣ್ಣನ ಆರೋಗ್ಯದ ಬಗ್ಗೆ ಅಪ್ಡೇಟ್ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಜ. 26ರಂದು ಶಿವಣ್ಣ ಅಮೆರಿಕದಿಂದ ರಾಜ್ಯಕ್ಕೆ ಆಗಮಿಸಿದ್ದಾರೆ. ಮನೆಗೆ ತೆರಳಿ ಗಣ್ಯರು, ಸೆಲೆಬ್ರಿಟಿಗಳು ಆರೋಗ್ಯದ ಕುರಿತು ವಿಚಾರಿಸುತ್ತಿರುವುದರಿಂದಾಗಿ ಶಿವಣ್ಣಗೆ ವಿಶ್ರಾಂತಿ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರು ಶಿರಸಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಮಧ್ಯೆ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಪ್ರತಿ ದಿನ ಶಿವಣ್ಣ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ, ಟಾಲಿವುಡ್ ಬಾಲಯ್ಯ ಕೂಡ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ.
ಶಿವಣ್ಣ ಕ್ಯಾನ್ಸರ್ ಚಿಕಿತ್ಸೆಗಾಗಿ ಟಾಲಿವುಡ್ ಬಾಲಯ್ಯ ಆಹ್ವಾನ ಕೂಡ ನೀಡಿದ್ದರು. ಅಲ್ಲದೇ, ಅಮಿತಾಬ್ ಬಚ್ಚನ್ ಹಾಗೂ ಬಾಲಯ್ಯ ಪ್ರತಿ ದಿನ ಗೀತಾ ಶಿವರಾಜಕುಮಾರ್ ಅವರಿಗೆ ಮೆಸೆಜ್ ಮಾಡಿ ಆರೋಗ್ಯದ ಬಗ್ಗೆ ಅಪ್ಡೇಟ್ ಪಡೆಯುತ್ತಿದ್ದಾರೆ. ಬಾಲಯ್ಯ ಅವರು ಹೈದರಾಬಾದ್ ಗೆ ಬಂದು ಚಿಕಿತ್ಸೆ ಪಡೆಯುವಂತೆ ಕೂಡ ಸೂಚಿಸಿದ್ದಾರೆ ಎನ್ನಲಾಗಿದೆ. ಅಮೆರಿಕದಲ್ಲಿದ್ದ ವೇಳೆ ಕರೆ ಮಾಡಿ ಕೂಡ ಶಿವಣ್ಣ ಆರೋಗ್ಯದ ಬಗ್ಗೆ ಅಮಿತಾಬ್ ಬಚ್ಚನ್ ಮಾಹಿತಿ ಪಡೆದಿದ್ದರು. ಅಲ್ಲದೇ, ಡೈರೆಕ್ಟರ್ ಪೂರಿಜಗನಾಥ್, ರಾಮ್ ಗೋಪಾಲ್ ವರ್ಮಾ ಕೂಡ ಕರೆ ಮಾಡಿ ಆರೋಗ್ಯದ ಕುರಿತು ವಿಚಾರಿಸಿದ್ದಾರೆ. ಅಣ್ಣಾವ್ರ ಕಾಲದಿಂದಲೂ ಅಮಿತಾಭ್, ಬಾಲಯ್ಯ ಕುಟುಂಬದ ಜೊತೆ ದೊಡ್ಮನೆ ಕುಟುಂಬ ಉತ್ತಮ ಬಾಂಧವ್ಯ ಹೊಂದಿದೆ. ಈಗಲೂ ಅದು ಹಾಗೆಯೇ ಮುಂದುವರೆದಿದೆ.