ಪ್ರಯಾಗ್‌ರಾಜ್: ಗೃಹ ಸಚಿವ ಅಮಿತ್ ಶಾ ಅವರ ಕುಟುಂಬ ಸೋಮವಾರ ಸೋಮವಾರ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಿತು. ತ್ರಿವೇಣಿ ಸಂಗಮಕ್ಕೆ ಬಂದ ಅವರೊಂದಿಗೆ ಹಲವಾರು ಸಾಧುಗಳು ಜತೆ ಸೇರಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, (Yogi Adityanath) ಬಾಬಾ ರಾಮ್ ದೇವ್ ಹಾಗೂ ಹಲವು ಅಖಾಡಗಳ ಸಂತರಿದ್ದರು.
ಅವರ ಪುತ್ರ ಜಯ್ ಶಾ ಸೇರಿದಂತೆ ಗೃಹ ಸಚಿವರ ಕುಟುಂಬ ಸದಸ್ಯರು ‘ಆರತಿ’ ಸೇರಿದಂತೆ ಎಲ್ಲ ಧಾರ್ಮಿಕ ಆಚರಣೆ ಮಾಡಿಸಿದರು. ಅಮಿತ್ ಶಾ ಅವರ ಪತ್ನಿ ಸೋನಾಲ್, ಸೊಸೆ ರಿಷಿತಾ ಮತ್ತು ಮೊಮ್ಮಕ್ಕಳು ಈ ಪುಣ್ಯ ಕಾರ್ಯದಲ್ಲಿ ಜತೆಗಿದ್ದರು. ಜಯ್ ಶಾ ಮತ್ತು ರಿಶಿತಾ ಅವರು ನವಜಾತ ಶಿಶುವನ್ನು ಕರೆದುಕೊಂಡು ಬಂದಿದ್ದು ವಿಶೇಷ ಎನಿಸಿತು. ಅಲ್ಲದೆ ದಂಪತಿ ಸಮೇತ ಮಗುವಿಗೆ ಸಂತರು ಆಶೀರ್ವಾದ ಮಾಡಿದರು. ಸ್ನಾನಕ್ಕೂ ಮೊದಲು, ಅಮಿತ್ ಶಾ ಪ್ರಯಾಗ್‌ರಾಜ್‌ನಲ್ಲಿರುವ ನಾನಾ ಅಖಾಡಗಳ ಸಾಧುಗಳ ಜತೆ ಸಂವಾದ ನಡೆಸಿದರು.
ದೇವಸ್ಥಾನಕ್ಕೆ ಭೇಟಿ
ಪವಿತ್ರ ಸ್ನಾನದ ನಂತರ ಅಮಿತ್ ಶಾ ಹಾಗೂ ಕುಟುಂಬ ಸದಸ್ಯರು ಬಡೇ ಹನುಮಾನ್ ಜಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಸಂತರರ ಜತೆ ಭೋಜನ ಸ್ವೀಕರಿಸಿದರು. ಅಮಿತ್ ಶಾ ಅವರು ಶರಣಾನಂದ ಜಿ ಅವರ ಆಶ್ರಮಕ್ಕೆ ಭೇಟಿ ಮಾಡಿ ಗುರು ಶರಣಾನಂದ ಮತ್ತು ಗೋವಿಂದ ಗಿರಿ ಜಿ ಮಹಾರಾಜ್ ಜೊತೆ ಮಾತುಕತೆ ನಡೆಸಿದ್ದಾರೆ.
ಭೇಟಿಗೆ ಮೊದಲು ಗೃಹ ಸಚಿವರು ಎಕ್ಸ್‌ನಲ್ಲಿ ಪೋಸ್ಟ್ ಪ್ರಕಟಿಸಿ , “ಮಹಾಕುಂಭವು ಸನಾತನ ಸಂಸ್ಕೃತಿಯ ವಿಶಿಷ್ಟ ಸಂಕೇತ. ಕುಂಭಮೇಳವು ಸಾಮರಸ್ಯದಲ್ಲಿ ಬೇರೂರಿರುವ ಸನಾತನ ಧರ್ಮದ ಜೀವನ ತತ್ವವನ್ನು ಪ್ರದರ್ಶಿಸುತ್ತದೆ. ಏಕತೆ ಮತ್ತು ಸಮಗ್ರತೆಯ ಈ ದೊಡ್ಡ ಉತ್ಸವ. ಅಲ್ಲಿ ಸಂತರಿಂದ ಆಶೀರ್ವಾದ ಪಡೆಯಲು ನಾನು ಕಾತರನಾಗಿದ್ದೇನೆ” ಎಂದು ಹೇಳಿದ್ದರು.
ಎರಡು ದಿನಗಳ ಹಿಂದೆ ಉತ್ತರ ಪ್ರದೇಶ ಸರ್ಕಾರದ ಸಚಿವರೆಲ್ಲರೂ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಫೆ 5 ರಂದು ಮಹಾಕುಂಭ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಪುಣ್ಯ ಸ್ನಾನ ಮಾಡಲಿದ್ದಾರೆ.
ರಾಜ್ಯ ಸರ್ಕಾರದ ಪ್ರಕಾರ, ಸೋಮವಾರ ಬೆಳಿಗ್ಗೆ 10 ಗಂಟೆಯ ವೇಳೆಗೆ 53.29 ಲಕ್ಷಕ್ಕೂ ಹೆಚ್ಚು ಜನರು ಮಹಾ ಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮೇಳದ ಪ್ರದೇಶವು 10 ಲಕ್ಷಕ್ಕೂ ಮಂದಿಗೆ ಆತಿಥ್ಯ ವಹಿಸುತ್ತದೆ. ಜನವರಿ 13ರಂದು ಕುಂಭ ಮೇಳ ಆರಂಭವಾದಾಗಿನಿಂದ ಇಲ್ಲಿಯವರೆಗೆ 13.21 ಕೋಟಿಗೂ ಹೆಚ್ಚು ಜನರು ಪುಣ್ಯ ಸ್ನಾನ ಮಾಡಿದ್ದಾರೆ.