ನವದೆಹಲಿ: ರಾಜ್ಯಸಭೆಯಲ್ಲಿ “ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪಯಣ” ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸಿ, ಜನರ ಹಕ್ಕುಗಳನ್ನು ದುರ್ಬಲಗೊಳಿಸಿದ್ದರು. ಅಲ್ಲದೇ, ಕಾಂಗ್ರೆಸ್ ಯಾವಾಗಲೂ ತನ್ನ ಹಿತಾಸಕ್ತಿಗಳಿಗೆ ಸರಿ ಹೊಂದುವಂತೆ ತಿದ್ದುಪಡಿ ಮಾಡಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಭಾರತೀಯ ಸಂವಿಧಾನದ ಖಾಲಿ ಪ್ರತಿಗಳನ್ನು ಒಯ್ಯುತ್ತಿದ್ದಾರೆ. ಇದು ಜನರಿಗೆ ಮತ್ತು ದೇಶಕ್ಕೆ ಮಾಡಿದ ದೊಡ್ಡ ವಂಚನೆಯಾಗಿದೆ. ಬಿಜೆಪಿ 16 ವರ್ಷಗಳ ಕಾಲ ಆಡಳಿತ ನಡೆಸಿ 22 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿದೆ. ಕಾಂಗ್ರೆಸ್ 55 ವರ್ಷಗಳ ಕಾಲ ಆಡಳಿತ ನಡೆಸಿತು. ಈ ಅವಧಿಯಲ್ಲಿ ಬಿಜೆಪಿ 77 ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ.
ನೆಹರು ಅವರ ಅವಧಿಯಲ್ಲಿ ಸಂವಿಧಾನದಲ್ಲಿ ಮೊದಲ ತಿದ್ದುಪಡಿಯನ್ನು ಮಾಡಲಾಯಿತು ಮತ್ತು 19ಎ ಅನ್ನು ಸೇರಿಸಲಾಯಿತು. ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಈ ತಿದ್ದುಪಡಿಯನ್ನು ಮಾಡಲಾಗಿದೆ. ಅದೇ ರೀತಿ 24ನೇ ತಿದ್ದುಪಡಿ ಮಾಡಿ ಈ ಮೂಲಕ ನಾಗರಿಕರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಸಂವಿಧಾನಕ್ಕೆ 19A ಅನ್ನು ಸೇರಿಸಲಾಯಿತು. ಈ ಬದಲಾವಣೆಯನ್ನು ಆ ಸಮಯದಲ್ಲಿ ಪ್ರಧಾನಿಯಾಗಿದ್ದ ಜವಾಹರ್ ಲಾಲ್ ನೆಹರು ಜಾರಿಗೆ ತಂದರು. ಕಾಂಗ್ರೆಸ್ ಸಂವಿಧಾನವನ್ನು ಯಾವುದೇ ಸದನಗಳಲ್ಲಿ ತರದೆ 35 ಎ ಪರಿಚ್ಛೇದವನ್ನು ಸೇರಿಸುವ ಮೂಲಕ ವೈಯಕ್ತಿಕ ಆಸ್ತಿ ಎಂದು ಪರಿಗಣಿಸಿದೆ ಎಂದು ಆರೋಪಿಸಿದ್ದಾರೆ.
ಭಾರತ ಎಂದಿಗೂ ಆರ್ಥಿಕವಾಗಿ ಸ್ವತಂತ್ರವಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದವರಿಗೆ ದೇಶದ ಜನರು ಮತ್ತು ಸಂವಿಧಾನವು ತಕ್ಕ ಉತ್ತರವನ್ನು ನೀಡಿದೆ ಎಂದು ಗುಡುಗಿದ್ದಾರೆ.