ಬೆಂಗಳೂರು: ಜಾಗತಿಕ-ಭೌಗೋಳಿಕ ಸಂಘರ್ಷ, ಸುಂಕದ ನೀತಿಗಳಿಂದಾಗಿ ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಸೇರಿ ಹಲವು ಕಾರಣಗಳಿಂದಾಗಿ ವಿಶ್ವದ ಐಟಿ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಭಾರತದಲ್ಲೂ ಇನ್ಫೋಸಿಸ್, ಟಿಸಿಎಸ್ ಸೇರಿ ಹಲವು ಕಂಪನಿಗಳು ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಇಷ್ಟಾದರೂ, 2020-21ನೇ ಹಣಕಾಸು ವರ್ಷದಿಂದ ಇದುವರೆಗೆ ಐಟಿ ಕಂಪನಿಗಳ ಉದ್ಯೋಗಿಗಳ ಸಂಬಳವು ಶೇ.37ರಷ್ಟು ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.
2020-21ನೇ ಹಣಕಾಸು ವರ್ಷದಿಂದ 2023-24ನೇ ಹಣಕಾಸು ವರ್ಷದಲ್ಲಿ ಐಟಿ ಉದ್ಯೋಗಿಗಳ ಸಂಬಳವು ಶೇ.12ರಿಂದ ಶೇ.37ರವರೆಗೆ ಏರಿಕೆಯಾಗಿದೆ. ಅದರಲ್ಲೂ, ಇನ್ಫೋಸಿಸ್ ಹಾಗೂ ವಿಪ್ರೋ ಕಂಪನಿಗಳ ನೌಕರರ ಸಂಬಳವು ಶೇ.30ರಷ್ಟು ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಕಾಗ್ನಿಜೆಂಟ್ ಮತ್ತು ಅಕ್ಸೆಂಚರ್ನಲ್ಲಿಕ್ರಮವಾಗಿ ಶೇ.12ರಷ್ಟು ಮತ್ತು ಶೇ.17.5ರಷ್ಟು ಮಾತ್ರ ಏರಿಕೆಯಾಗಿದೆ.
ಕರ್ನಾಟಕದ ಇನ್ಫೋಸಿಸ್ ಕಂಪನಿಯಲ್ಲಿ 2021-22ನೇ ಹಣಕಾಸು ವರ್ಷದಲ್ಲಿ ಸಂಬಳವು 7.2 ಲಕ್ಷದಿಂದ 8.1 ಲಕ್ಷಕ್ಕೆ ಏರಿತು. ಅಂದರೆ 13% ರಷ್ಟು ಹೆಚ್ಚಳವಾಗಿತ್ತು. 2022-23 ರಲ್ಲಿ 9 ಲಕ್ಷಕ್ಕೆ ಏರಿತು, ಅಂದರೆ 10.5% ರಷ್ಟು ಹೆಚ್ಚಳವಾಗಿತ್ತು. ನಂತರದ ವರ್ಷದಲ್ಲಿ 8.5% ರಷ್ಟು ಹೆಚ್ಚಳವಾಗಿತ್ತು. ಟೆಕ್ ಮಹೀಂದ್ರಾ ಕಂಪನಿಯಲ್ಲಿ 2022 ಮತ್ತು 2023 ರ ನಡುವೆ ಹೆಚ್ಚಿನ ಏರಿಕೆ ಕಂಡುಬಂದಿದೆ. ಆದರೆ 2023 ಮತ್ತು 2024 ರ ನಡುವೆ ಯಾವುದೇ ಬದಲಾವಣೆ ಆಗಿಲ್ಲ. ವಿಪ್ರೋ ಕಂಪನಿಯಲ್ಲಿ 2021-22 ರಲ್ಲಿ ಶೇ.10 ರಿಂದ ಶೇ.12ಕ್ಕೆ ಏರಿತು. ನಂತರ 2023-24 ರಲ್ಲಿ ಶೇ.10ಕ್ಕೆ ಇಳಿಯಿತು.
ಕಳೆದ ಕೆಲವು ವರ್ಷಗಳಲ್ಲಿ ಐಟಿ ಉದ್ಯಮದಲ್ಲಿ ದೊಡ್ಡ ಬದಲಾವಣೆಗಳಾಗಿವೆ. ಸಂಬಳಗಳು ಗಣನೀಯವಾಗಿ ಏರಿವೆ. ಆದರೆ ಈ ಏರಿಕೆಯ ವೇಗ ಈಗ ಕಡಿಮೆಯಾಗುತ್ತಿದೆ. ಸಂಬಳ ಹೆಚ್ಚಳವು ಕಂಪನಿಯ ಬೆಳವಣಿಗೆ, ಬೇರೆ ಕಂಪನಿಗಳ ಪೈಪೋಟಿ, ಉದ್ಯೋಗಿಗಳ ಕೌಶಲ್ಯ, ಉದ್ಯೋಗಿಗಳ ಬದಲಾವಣೆ ಮತ್ತು ಹಣದ ಬೆಲೆ ಏರಿಕೆಯ ಮೇಲೆ ನಿರ್ಧಾರವಾಗುತ್ತದೆ.