ಬೆಂಗಳೂರು : ಅಮ್ಜೆನ್ (NASDAQ:AMGN) ಇಂದು ಹೈದ್ರಾಬಾದ್ ನಲ್ಲಿ ತನ್ನ ಹೊಸ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವನ್ನು ಆರಂಭ ಮಾಡಿದೆ. 2025 ರಲ್ಲಿ ಕಂಪನಿಯು ಈ ಘಟಕಕ್ಕೆ 200 ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಲಿದೆ. ಇದಲ್ಲದೇ, ಮುಂಬರುವ ವರ್ಷಗಳಲ್ಲಿ ಕಂಪನಿಯು ಹೆಚ್ಚುವರಿ ಸುಸ್ಥಿರ ಹೂಡಿಕೆಗಳನ್ನು ಮಾಡುವ ಯೋಜನೆಗಳನ್ನು ರೂಪಿಸಿದೆ. ಈ ಘಟಕವು ಅಮ್ಜೆನ್ ನ ಡಿಜಿಟಲ್ ಸಾಮರ್ಥ್ಯಗಳನ್ನು ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್ ಮೂಲಕ ವೇಗವರ್ಧಕಗೊಳಿಸಿಕೊಳ್ಳಲಿದ್ದು, ಔಷಧಗಳ ಕ್ಷೇತ್ರದಲ್ಲಿ ಸುಧಾರಿತ ಯೋಜನೆಗಳನ್ನು ರೂಪಿಸಲಿದೆ. ಇದರ ಜೊತೆಗೆ ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಲಿದೆ.
ಅಮ್ಜೆನ್ ಇಂಡಿಯಾ ಹೈಟೆಕ್ ಸಿಟಿಯಲ್ಲಿ ಸ್ಥಾಪಿತವಾಗಿದ್ದು, ಸರಿಸುಮಾರು 5,24,000 ಚದರಡಿ ವಿಸ್ತೀರ್ಣವನ್ನು ಹೊಂದಿದೆ. ಸ್ಪೈರ್ ನ ಆರ್ ಎಂಝಡ್ ಟಾವರ್ 110 ಮತ್ತು ನೆಕ್ಸಿಟಿಯ ಟಾವರ್ 20 ರಲ್ಲಿ ಇರುವ ಈ ಸಂಸ್ಥೆಯು ನಾವೀನ್ಯತೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ. ಈ ಘಟಕದ ಉದ್ಘಾಟನಾ ಸಮಾರಂಭದಲ್ಲಿ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಐಟಿ, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ಸ್, ಇಂಡಸ್ಟ್ರಿ & ಕಾಮರ್ಸ್, ಲೆಜಿಸ್ಲೇಟಿವ್ ಅಫೇರ್ಸ್ ಇಲಾಖೆ ಸಚಿವ ಡಿ.ಶ್ರೀಧರ್ ಬಾಬು ಮತ್ತು ಅಮ್ಜೆನ್ ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ರಾಬರ್ಟ್ ಎ.ಬ್ರಾಡ್ ವೇ ಉಪಸ್ಥಿತರಿದ್ದರು,
ಈ ಸಂದರ್ಭದಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರು, ನಮ್ಮ ವೈಬ್ರೆಂಟ್ ಸಿಟಿಗೆ ಅಮ್ಜೆನ್ ಅನ್ನು ಸ್ವಾಗತಿಸಲು ನಮಗೆ ಸಂತಸವೆನಿಸುತ್ತಿದೆ. ಈ ಸಂಸ್ಥೆಯು ಪ್ರಪಂಚದಾದ್ಯಂತ ರೋಗಿಗಳ ಜೀವನದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಜೈವಿಕ ತಂತ್ರಜ್ಞಾನ ಕೇಂದ್ರವಾಗಿ ಹೈದ್ರಾಬಾದ್ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಅಮ್ಜೆನ್ ನಂತಹ ಜಾಗತಿಕ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದನ್ನು ನಾವು ಎದುರು ನೋಡುತ್ತಿದ್ದೇವೆ’’ ಎಂದರು. ಅಮ್ಜೆನ್ ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ರಾಬರ್ಟ್ ಎ.ಬ್ರಾಡ್ ವೇ ಅವರು ಮಾತನಾಡಿ,ಅಮ್ಜೆನ್ ಇಂಡಿಯಾದ ಉದ್ಘಾಟನೆಯು ನಮ್ಮ ಜಾಗತಿಕ ಜಾಲದಾದ್ಯಂತ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಮ್ಮ ಪ್ರಯತ್ನದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದಂತಾಗಿದೆ. ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸಲು ಇದು ಸಹಕಾರಿಯಾಗಲಿದೆ. ಇಂತಹ ಅವಕಾಶವನ್ನು ಮಾಡಿಕೊಟ್ಟಿರುವ ತೆಲಂಗಾಣ ಸರ್ಕಾರದ ಪಾಲುದಾರಿಕೆಗೆ ನಾವು ಕೃತಜ್ಞರಾಗಿದ್ದೇವೆ ಮತ್ತು ಜೀವವಿಜ್ಞಾನ ಹಾಗೂ ಅತ್ಯಾಧುನಿಕ ನಾವೀನ್ಯತೆ ಅಭಿವೃದ್ಧಿಗೆ ಹೊಂದಬಹುದಾದ ಪರಿಸರ ವ್ಯವಸ್ಥೆಯಲ್ಲಿ ಭಾಗಿಯಾಗುತ್ತಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ’’ ಎಂದು ತಿಳಿಸಿದರು.