ವಾಷಿಂಗ್ಟನ್: ಎಚ್1 ಬಿ ವೀಸಾ, ವಲಸೆ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ನಿಲುವುಗಳು ಭಾರತೀಯರಿಗೆ ಸಂಕಷ್ಟ ತಂದೊಡ್ಡಲಿದೆಯೇ ಎಂಬ ಚರ್ಚೆಯ ನಡುವೆಯೇ, ಪ್ರತಿಭಾವಂತರು ನಮ್ಮ ದೇಶಕ್ಕೆ ಬರುವುದನ್ನು ನಾವು ಸ್ವಾಗತಿಸುತ್ತೇನೆ ಎಂದು ಬುಧವಾರ ಟ್ರಂಪ್ ಹೇಳಿದ್ದಾರೆ. ಅವರ ಈ ಹೇಳಿಕೆಯಿಂದ ಭಾರತೀಯ ವೃತ್ತಿಪರರು ನಿರಾಳರಾಗಿದ್ದು, ಅವರ ಆತಂಕ ಸ್ವಲ್ಪಮಟ್ಟಿಗೆ ದೂರವಾಗಿದೆ.
ಶ್ವೇತಭವನದಲ್ಲಿ ಒರಾಕಲ್ ಸಿಟಿಒ ಲ್ಯಾರಿ ಎಲಿಸನ್,(Larry Ellison) ಸಾಫ್ಟ್‌ಬ್ಯಾಂಕ್ ಸಿಇಒ ಮಸಯೋಶಿ ಸನ್(Masayoshi Sun) ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, “ವೀಸಾ ವಿಚಾರದಲ್ಲಿ ನಾನು ಎರಡೂ ವಾದಗಳನ್ನು ಒಪ್ಪುತ್ತೇನೆ. ಅಲ್ಲದೆ ನಮ್ಮ ದೇಶಕ್ಕೆ ಸಮರ್ಥರು ಮತ್ತು ಪ್ರತಿಭಾವಂತರು ಬರುವುದನ್ನು ನಾನು ಇಷ್ಟಪಡುತ್ತೇನೆ.” ಎಂದು ಹೇಳಿದ್ದಾರೆ.
ಟೆಸ್ಲಾ ಸಿಇಒ ಎಲಾನ್ ಮಸ್ಕ್ ಸೇರಿದಂತೆ ಟ್ರಂಪ್ ಅವರ ಕೆಲವು ಆಪ್ತರು, ಅಮೆರಿಕದ ಚುನಾವಣೆ ನಂತರದಲ್ಲಿ ಎಚ್ -1ಬಿ ವೀಸಾಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ್ದರು. ಟೆಕ್ ದೈತ್ಯ ಕಂಪನಿಗಳನ್ನು ಹೊಂದಿರುವ ಎಲಾನ್ ಮಸ್ಕ್‌ಗೆ ಭಾರತೀಯರೂ ಸೇರಿದಂತೆ ಅರ್ಹ ಟೆಕ್ ವೃತ್ತಿಪರರ ಅಗತ್ಯ ಹೆಚ್ಚೇ ಇದೆ. ಹೀಗಾಗಿ ಅವರು ಎಚ್-1ಬಿ ವೀಸಾಗೆ ಬೆಂಬಲವಾಗಿ ನಿಂತಿದ್ದರು. ಆದರೆ, ಟ್ರಂಪ್‌ಗೆ ಚುನಾವಣೆಯಲ್ಲಿ ಬೆಂಬಲ ಕೊಟ್ಟಿದ್ದ ಕೆಲವು ಸಂಪ್ರದಾಯವಾದಿಗಳು ಹಾಗೂ ರಿಪಬ್ಲಿಕನ್ ಪಕ್ಷದ ಬೆಂಬಲಿರಗು ಎಚ್-1ಬಿ ವೀಸಾವನ್ನು(H-1B visa) ವಿರೋಧಿಸುತ್ತಾ ಬಂದಿದ್ದಾರೆ.
ಈಗ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್, ನಮ್ಮ ದೇಶಕ್ಕೆ ಸಮರ್ಥ ಪ್ರತಿಭಾವಂತರು ಬರಬೇಕೆಂದು ನಾವು ಬಯಸುತ್ತೇವೆ. ಎಚ್ -1 ಬಿ ವೀಸಾ ಯೋಜನೆ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿರುವ ಕಾರಣ, ಟ್ರಂಪ್ ಈ ವೀಸಾ ಕುರಿತು ಮೃದು ಧೋರಣೆ ತಾಳಿರುವುದರ ಸುಳಿವು ನೀಡಿದೆ.
“ನಾವು ನಮ್ಮ ದೇಶದಲ್ಲಿ ಗುಣಮಟ್ಟದ ವೃತ್ತಿಪರರನ್ನು ಹೊಂದಿರಬೇಕು. ಹೀಗಾಗಿ ವೀಸಾ ನೀತಿಗಳಿಗೆ ಸಂಬಂಧಿಸಿ ಬೇಕು ಮತ್ತು ಬೇಡ ಎಂಬ ಎರಡೂ ವಾದವನ್ನು ಆಲಿಸಲು ಮುಂದಾಗಿದ್ದೇನೆ. ನಾವು ಪ್ರತಿಭಾವಂತರನ್ನು ದೇಶಕ್ಕೆ ಬರಲು ಬಿಡಬೇಕು. ನಾವು ಆ ಕೆಲಸವನ್ನು ಎಚ್ -1 ಬಿ ವೀಸಾ ಮೂಲಕ ಮಾಡುತ್ತೇವೆ” ಎಂದು ಟ್ರಂಪ್ ಹೇಳಿದ್ದಾರೆ. .
ಎಚ್ -1 ಬಿ ವೀಸಾ ಎನ್ನುವುದು ಅಮೆರಿಕದಲ್ಲಿ ಹೆಚ್ಚು ನುರಿತ, ಪರಿಣತ ವಿದೇಶಿ ವೃತ್ತಿಪರರಿಗೆ ನೀಡುವ ತಾತ್ಕಾಲಿಕ ವೀಸಾಗಳಾಗಿವೆ. ಈ ವೀಸಾಗಳನ್ನು ಪಡೆದವರ ಪೈಕಿ ಶೇ.72ರಷ್ಟು ಭಾರತೀಯ ಪ್ರಜೆಗಳಿದ್ದಾರೆ. ಇದು ಒಬ್ಬ ವ್ಯಕ್ತಿಗೆ 6 ವರ್ಷಗಳ ಕಾಲ ಅಮೆರಿಕದಲ್ಲಿ ಉಳಿಯಲು ಅವಕಾಶ ಮಾಡಿಕೊಡುತ್ತದೆ. ವೀಸಾವನ್ನು ಆರಂಭದಲ್ಲಿ 3 ವರ್ಷಗಳವರೆಗೆ ನೀಡಲಾಗುತ್ತದೆ. ನಂತರ ಮತ್ತೆ 3 ವರ್ಷಗಳವರೆಗೆ ವಿಸ್ತರಿಸಬಹುದು.