ದುಬೈ : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇಂದು ಬಿಡುಗಡೆ ಮಾಡಿರುವ ನೂತನ ಮಹಿಳಾ ಟಿ20ಐ ಶ್ರೇಯಾಂಕದಲ್ಲಿ ನ್ಯೂಜಿಲೆಂಡ್ ತಂಡದ ನಾಯಕಿ ಅಮೆಲಿಯಾ ಕೆರ್ ಮತ್ತು ಆಸ್ಟ್ರೇಲಿಯಾದ ಯುವ ಬ್ಯಾಟರ್ ಜಾರ್ಜಿಯಾ ವೋಲ್ ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಉಭಯ ಆಟಗಾರ್ತಿಯರು ತಮ್ಮ ವೃತ್ತಿಜೀವನದ ಶ್ರೇಷ್ಠ ಸಾಧನೆಯೊಂದಿಗೆ ವಿಶ್ವದ ನಂ.1 ಪಟ್ಟ ಅಲಂಕರಿಸಿದ್ದಾರೆ.
ನ್ಯೂಜಿಲೆಂಡ್ ತಂಡದ ನಾಯಕಿ ಅಮೆಲಿಯಾ ಕೆರ್ ಅವರು ಮೊದಲ ಬಾರಿಗೆ ಐಸಿಸಿ ಟಿ20ಐ ಆಲ್ ರೌಂಡರ್ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 2023ರ ಅಕ್ಟೋಬರ್‌ನಿಂದ ಅಗ್ರಸ್ಥಾನದಲ್ಲಿದ್ದ ವೆಸ್ಟ್ ಇಂಡೀಸ್‌ನ ಹೇಲಿ ಮ್ಯಾಥ್ಯೂಸ್ ಅವರನ್ನು ಕೆರ್ ಹಿಂದಿಕ್ಕಿದ್ದಾರೆ. ಜಿಂಬಾಬ್ವೆ ವಿರುದ್ಧದ ಇತ್ತೀಚಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಅವರು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದರು.
ವಿಶೇಷವೆಂದರೆ, ನಾಯಕಿಯಾಗಿ ಟಿ20ಯಲ್ಲಿ ಎರಡು ಶತಕ ಸಿಡಿಸಿದ ವಿಶ್ವದ ನಾಲ್ಕನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅಮೆಲಿಯಾ ಪಾತ್ರರಾಗಿದ್ದಾರೆ. ಇದಲ್ಲದೆ, ಸತತ 11 ಪಂದ್ಯಗಳಲ್ಲಿ 30ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗರಾಗಿಯೂ (ಪುರುಷ ಮತ್ತು ಮಹಿಳಾ ಕ್ರಿಕೆಟ್ ಎರಡೂ ಸೇರಿ) ಅವರು ದಾಖಲೆ ಬರೆದಿದ್ದಾರೆ.
ಬ್ಯಾಟಿಂಗ್‌ನಲ್ಲಿ ಜಾರ್ಜಿಯಾ ವೋಲ್ ಪ್ರಾಬಲ್ಯ:
ಆಸ್ಟ್ರೇಲಿಯಾದ ಬಲಗೈ ಬ್ಯಾಟರ್ ಜಾರ್ಜಿಯಾ ವೋಲ್ ಅವರು ಎಂಟು ಸ್ಥಾನಗಳ ಭಾರಿ ಜಿಗಿತ ಕಂಡು ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. ತಮ್ಮದೇ ತಂಡದ ಬೆತ್ ಮೂನಿಯನ್ನು ಅವರು ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೇವಲ 52 ಎಸೆತಗಳಲ್ಲಿ ಶತಕ ಸಿಡಿಸಿದ ಅವರು, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಕೇವಲ 22ನೇ ವಯಸ್ಸಿನಲ್ಲಿ ಅವರು ಈ ಮೈಲಿಗಲ್ಲು ತಲುಪಿರುವುದು ಗಮನಾರ್ಹ.
ಭಾರತೀಯ ಆಟಗಾರ್ತಿಯರ ಸ್ಥಿತಿಗತಿ:
ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅವರು ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದರೆ, ಜೆಮಿಮಾ ರೋಡ್ರಿಗಸ್ ಮತ್ತೆ ಅಗ್ರ 10ರ ಪಟ್ಟಿಗೆ ಮರಳಿದ್ದು, 10ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರೇಣುಕಾ ಸಿಂಗ್ 5ನೇ ಸ್ಥಾನಕ್ಕೆ ಮತ್ತು ಅರುಂಧತಿ ರೆಡ್ಡಿ 9ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ದೀಪ್ತಿ ಶರ್ಮಾ ಆಲ್ ರೌಂಡರ್ ಪಟ್ಟಿಯಲ್ಲಿ ತಮ್ಮ 3ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ : ಯುದ್ಧದಿಂದ ಅಮೆರಿಕ ಹಿಂದೆ ಸರಿಯುವ ಮುನ್ಸೂಚನೆ.. ಇಸ್ರೇಲ್‌ನಿಂದ ದಾಳಿ ಮುಂದುವರಿಸುವ ಪ್ರತಿಜ್ಞೆ!



















