ಬೆಂಗಳೂರು: ಬ್ರೇಕ್ ಫೇಲ್ಯೂರ್ ಆಗಿ ತರಕಾರಿ ಅಂಗಡಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಾಪಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ನಗರದ ವಿಲ್ಸನ್ ಗಾರ್ಡನ್ ನ 9ನೇ ಮುಖ್ಯ ರಸ್ತೆಯಲ್ಲಿ ನಡೆದಿದೆ. ತರಕಾರಿ ವ್ಯಾಪಾರಿ ರಮೇಶ್ (49) ಸಾವನ್ನಪ್ಪಿರುವ ದುರ್ದೈವಿ. ಗುರುವಾರ ಈ ಘಟನೆ ನಡೆದಿದೆ. ಆಂಬುಲೆನ್ಸ್ ಬ್ರೇಕ್ ಫೇಲ್ಯೂರ್ ಆಗಿ ದ್ವಿಚಕ್ರ ವಾಹನ ಆಟೋಗಳಿಗೆ ಡಿಕ್ಕಿ ಹೊಡೆದಿದೆ.
ನಂತರ ನಿಯಂತ್ರಣ ತಪ್ಪಿ ರಸ್ತೆ ಮೇಲೆ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಿದ್ದ ರಮೇಶ್ ಗೆ ಡಿಕ್ಕಿ ಹೊಡೆದಿದೆ. ಆಂಬುಲೆನ್ಸ್ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರಮೇಶ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಮೇಶ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸದ್ಯ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಂಬುಲೆನ್ಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.