ಗಾಂಧಿನಗರ : ಗುಜರಾತ್‌ನ ಮೋಡಸಾ ಪಟ್ಟಣದಲ್ಲಿ ಭೀಕರ ದುರಂತವೊಂದು ನಡೆದಿದ್ದು, ಚಲಿಸುತ್ತಿದ್ದ ಆಂಬ್ಯುಲೆನ್ಸ್‌ಗೆ ಏಕಾಏಕಿ ಬೆಂಕಿ ಹತ್ತಿಕೊಂಡು ನವಜಾತ ಶಿಶು, ವೈದ್ಯ ಸೇರಿ ನಾಲ್ವರು ಸಜೀವ ದಹನವಾಗಿದ್ದಾರೆ.
ಆಸ್ಪತ್ರೆಯಲ್ಲಿ ಜನಿಸಿದ 1 ದಿನದ ಮಗುವಿನ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಅದನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಮೃತರ ಪೈಕಿ ನವಜಾತ ಶಿಶು, ವೈದ್ಯ, ಮತ್ತು ಇತರ ಇಬ್ಬರು ಸೇರಿದ್ದಾರೆ. ಮೋಡಸಾ-ಧನ್ಸುರ ರಸ್ತೆಯಲ್ಲಿ ಆಂಬ್ಯುಲೆನ್ಸ್ ಸಾಗುತ್ತಿದ್ದಾಗ ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆಗೆ ಅಂಬ್ಯಲೆನ್ಸ್‌ಗೆ ಬೆಂಕಿ ಹತ್ತಿಕೊಂಡಿದೆ. ಮೃತರನ್ನು 1 ದಿನದ ನವಜಾತ ಶಿಶು, ಅದರ ತಂದೆ ಜಿಗ್ನೇಶ್ ಮೋಚಿ (38), ಅಹಮಾದಾಬಾದ್‌ನ ವೈದ್ಯ ಶಾಂತಿಲಾಲ್ ತೆನಿಟಾ (30), ನರ್ಸ್ ಭುರಿಬೆನ್ ಮಾನತ್ (23) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಆಂಬ್ಯುಲೆನ್ಸ್ ಚಾಲಕ ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದಾನೆ. ಆಂಬ್ಯುಲೆನ್ಸ್ ಸುಟ್ಟು ಕರಕಲಾಗಿದೆ. ಗಾಯಗೊಂಡ ಮೂವರಲ್ಲಿ ಮೋಚಿಯ ಇಬ್ಬರು ಸಂಬಂಧಿಕರೂ ಇದ್ದಾರೆ. ಸುಟ್ಟ ಗಾಯಗಳೊಂದಿಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ಟಾಟಾ ಮೋಟಾರ್ಸ್‌ನಿಂದ ಹೊಸ ಪವರ್‌ಟ್ರೇನ್ ಕ್ರಾಂತಿ : ಯಾವುದಕ್ಕೆಲ್ಲ ಹೈಬ್ರಿಡ್ ಆಯ್ಕೆ?



















