ರೆಬೆಲ್‌ಸ್ಟಾರ್ ಅಂಬರೀಶ್ ಪುತ್ರ ಮರಿ ರೆಬೆಲ್ ಏಕಾಏಕಿ ಚಿತ್ರರಂಗದಿಂದ ಕಾಣೆಯಾಗಿದ್ದಾರೆ ಎಂದು ಅಭಿಮಾನಿಗಳು ಹಾಗೂ ಸಿನಿ ರಸಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಕೇವಲ ಎರಡೇ ಸಿನಿಮಾಗಳಿಗೆ ಮರಿ ರೆಬೆಲ್ ಸುಸ್ತಾದ್ರಾ? ಎಂಬೆಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಅಭಿಷೇಕ್ ಅಂಬರೀಶ್ ಚಂದನವನಕ್ಕೆ ಕಾಲಿಟ್ಟಾಗ ರೆಬೆಲ್‌ಸ್ಟಾರ್ ಅಭಿಮಾನಿಗಳು ಕುಣಿದು ಸಂಭ್ರಮಿಸಿದ್ದರು. ಮಂಡ್ಯ, ಮೈಸೂರು ಭಾಗದ ಜನರಲ್ಲಿ ಹೊಸ ನಾಯಕ ಬಂದ ಖುಷಿ ಆಗಿತ್ತು. ಆದರೆ ಎರಡು ಸಿನಿಮಾಗೆ ಮರಿ ರೆಬೆಲ್ ಸ್ಟಾರ್ ಸೈಲೆಂಟ್ ಆಗಿದ್ದು ಸಿನಿಪ್ರಿಯರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಅಪ್ಪನ ಹೆಸರಿದೆ. ಅಮ್ಮನ ಪವರ್ ಇದೆ. ಚಿತ್ರರಂಗದಲ್ಲಿ ಸ್ನೇಹಿತರು- ಹಿತೈಷಿಗಳಿದ್ದಾರೆ. ಆದರೂ ಅಭಿಷೇಕ್ ಸಿನಿ ರಂಗದಿಂದ ವಿಮುಖರಾಗಿದ್ದೇಕೆ? ಎಂಬ ನೋವು ಅಭಿಮಾನಿಗಳನ್ನು ಕಾಡುತ್ತಿದೆ. ಈಗಾಗಲೇ ಅಭಿಷೇಕ್ ಅಂಬರೀಶ್ ನಟಿಸಬೇಕಿದ್ದ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ಸಿಗುತ್ತಿಲ್ಲ. ಮುಂಗಾರು ಮಳೆ ಕೃಷ್ಣ ‘ಕಾಳಿ’ ಸಿನಿಮಾ ಅನೌನ್ಸ್ ಮಾಡಿದ್ದರು. ಅಲ್ಲದೇ, ‘ಅಯೋಗ್ಯ’ ಮಹೇಶ್ ಕೂಡ ಮತ್ತೊಂದು ಸಿನಿಮಾ ಮಾಡಲು ಹೊರಟಿದ್ದರು. ಈಗ ಈ ಎರಡೂ ಸಿನಿಮಾಗಳ ಬಗ್ಗೆ ಸುಳಿವೇ ಇಲ್ಲದಾಗಿದೆ. ಇದು ಅಭಿಮಾನಿಗಳನ್ನು ಕೆರಳಿಸುತ್ತಿದೆ.
ಅಭಿಷೇಕ್ ಅಂಬರೀಶ್ ಮನಸ್ಸಿನಲ್ಲಿ ಏನಿದೆ ಅನ್ನೋದು ಅವರ ಅಭಿಮಾನಿಗಳಿಗೆ ತಿಳಿಯುತ್ತಿಲ್ಲ. ‘ಕಾಳಿ’ ಸಿನಿಮಾ ಇಷ್ಟೋತ್ತಿಗಾಗಲೇ ಸೆಟ್ಟೇರಿ ಸಿನಿಮಾ ಮುಗಿಯಬೇಕಿತ್ತು. ಮುಂಗಾರು ಮಳೆ ಕೃಷ್ಣ ‘ಕಾಳಿ’ ಅಭಿಷೇಕ್ ಅಂಬರೀಶ್ ಲುಕ್ ಟೆಸ್ಟ್ ಕೂಡ ಮಾಡಿದ್ದರು. ಮಾಸ್ ರಗಡ್ ಲುಕ್ ನಲ್ಲಿ ಅಭಿಷೇಕ್ ಅಂಬರೀಶ್ ಕಾಣಿಸಿಕೊಂಡಿದ್ದರು. ಈಗ ಕಾಳಿ ಚಿತ್ರದ ಬಗ್ಗೆ ಯಾವ ಅಪ್ಡೇಟ್ ಕೂಡ ಸಿಗುತ್ತಿಲ್ಲ.
‘ಅಯೋಗ್ಯ’ ಮಹೇಶ್ ನಿರ್ದೇಶಿಸಬೇಕಿರುವ ಇನ್ನೂ ಹೆಸರಿಡದ ಎಎ04. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಬೇಕಿದ್ದ ಈ ಸಿನಿಮಾ ಬಗ್ಗೆನೂ ಸುಳಿವಿಲ್ಲ. ಮುಂದಿನ ದಿನಗಳಲ್ಲಿ ಅಭಿಷೇಕ್ ಅಂಬರೀಶ್ ತುಂಬುತ್ತಾರಾ? ಮುಂದಿನ ದಿನಗಳಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಬಹುದಾ? ನಟನೆಯನ್ನು ಗಂಭೀರವಾಗಿ ಪರಿಗಣಿಸುತ್ತಾರಾ? ಅಥವಾ ನಟನೆಯಿಂದಲೇ ದೂರ ಉಳಿಯುತ್ತಾರಾ? ಎಂಬುವುದನ್ನು ಕಾಯ್ದು ನೋಡಬೇಕಿದೆ.