ವಾಷಿಂಗ್ಟನ್: ಅಮೆರಿಕದ ಫೋರ್ಬ್ಸ್ ಮ್ಯಾಗಜೀನ್ ವಿಶ್ವದ ಶ್ರೀಮಂತರ ಪಟ್ಟಿಯನ್ನು ರಿಲೀಸ್ ಮಾಡಿದೆ. ಅಚ್ಚರಿ ಎನ್ನುವಂತೆ ಈ ಬಾರಿ ಭಾರತದ ಮುಕೇಶ್ ಅಂಬಾನಿ ಅಗ್ರ ಹತ್ತರ ರೇಸ್ ನಿಂದ ಹೊರ ಬಿದ್ದಿದ್ದಾರೆ. ಈ ಬಾರಿಯೂ ಸ್ಪೇಸ್ ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಮೊದಲ ಸ್ಥಾನ ಅಲಂಕರಿಸಿದ್ದಾರೆ. 29 ಲಕ್ಷ ಕೋಟಿಯ ಸಂಪತ್ತಿನೊಂದಿಗೆ ಮಸ್ಕ್ ವಿಶ್ವದ ಶತಕೋಟ್ಯಾಧೀಶರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಈ ಸಾಲಿನಲ್ಲಿ ಮಸ್ಕ್ ಸಂಪತ್ತು ಶೇಕಡ 75ರಷ್ಟು ವೃದ್ಧಿಯಾಗಿದೆ.
ಇನ್ನು ಎರಡನೇ ಸ್ಥಾನದಲ್ಲಿ ಫೇಸ್ ಬುಕ್ ನ ಮಾರ್ಕ್ ಜುಕರ್ ಬರ್ಗ್ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ. ಬರೋಬ್ಬರಿ 19 ಲಕ್ಷ ಕೋಟಿ ಸಂಪತ್ತಿನ ಒಡೆಯರಾಗಿರೋ ಜುಕರ್ ಬರ್ಗ್ ನಂತರದ ಸ್ಥಾನವನ್ನ ಜೆಬ್ ಬೆಜೋಸ್ ಪ್ರತ್ಯಕ್ಷರಾಗಿದ್ದಾರೆ. ಬೆಜೋಸ್ ಸಂಪತ್ತು 18 ಲಕ್ಷ ಕೋಟಿಯಷ್ಟಿದೆ.
ಈ ಬಾರಿ ಭಾರತದ ಯಾವೊಬ್ಬ ಉದ್ಯಮಿಯೂ ಫೋರ್ಬ್ಸ್ ಪಟ್ಟಿಯ ಟಾಪ್ 10ರಲ್ಲಿಲ್ಲ. 7.85 ಲಕ್ಷ ಕೋಟಿಯ ಆಸ್ತಿಯೊಂದಿಗೆ ರಿಲಯನ್ಸ್ ಮಾಲೀಕ ಮುಕೇಶ್ ಅಂಬಾನಿ ಈ ಬಾರಿ 18ನೇ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲಾ ಪಟ್ಟಿಯಲ್ಲಿರೋ ಮೊದಲ ಭಾರತೀಯ ಕೂಡಾ ಹೌದು. ಇನ್ನು 4.8 ಲಕ್ಷ ಕೋಟಿ ಸಂಪತ್ತಿನ ಒಡೆಯ ಗೌತಮ್ ಅದಾನಿ 56 ಸ್ಥಾನದಲ್ಲಿದ್ದಾರೆ. ಉಳಿದಂತೆ, 56ನೇ ಸ್ಥಾನ ಸಾವಿತ್ರಿ ಜಿಂದಾಲ್ ಪಾಲಾಗಿದೆ.
ಈ ಮೂಲಕ ಜಗತ್ತಿನಲ್ಲಿ ಒಟ್ಟು 3028 ಶತಕೋಟ್ಯಾಧೀಶರಿದ್ದು, ಇವರ ಒಟ್ಟು ಆಸ್ತಿ ಮೌಲ್ಯ 1,368 ಲಕ್ಷ ಕೋಟಿಯಷ್ಟಿದೆ. 902 ಆಗರ್ಭಶ್ರೀಮಂತರನ್ನು ಹೊಂದೋ ಮೂಲಕ ಅಮೆರಿಕಾ ಮೊದಲ ಸ್ಥಾನದಲ್ಲಿದ್ದರೆ, 516 ಕುಬೇರರ ಮೂಲಕ ಚೀನಾ ಎರಡನೇ ಸ್ಥಾನದಲ್ಲಿದೆ, ಭಾರತದಲ್ಲಿ ಒಟ್ಟು 205 ಮಂದಿ ಲಕ್ಮೀ ಪುತ್ರರಿದ್ದಾರೆ ಅಂತಾ ಫೋರ್ಬ್ಸ್ ವರದಿ ಮಾಡಿದೆ.