ನವದೆಹಲಿ: ಸರ್ಕಾರಿ ಉದ್ಯೋಗಿಗಳನ್ನು ಹೊರತುಪಡಿಸಿ ಖಾಸಗಿ ವಲಯದ ಯಾವ ಕ್ಷೇತ್ರದಲ್ಲೂ ಈಗ ಉದ್ಯೋಗ ಭದ್ರತೆ ಇಲ್ಲ. ಅದರಲ್ಲೂ, ಜಾಗತಿಕ ಭೌಗೋಳಿಕ-ರಾಜಕೀಯ ಸಂಘರ್ಷಗಳು, ಆರ್ಥಿಕ ಹಿಂಜರಿತ ಸೇರಿ ಹಲವು ಕಾರಣಗಳಿಂದಾಗಿ ಖಾಸಗಿ ಉದ್ಯೋಗ ಕ್ಷೇತ್ರದಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ. ಇದರ ಮಧ್ಯೆಯೇ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವೂ ಸಾವಿರಾರು ಜನರ ಉದ್ಯೋಗ ಕಸಿಯುತ್ತದೆ. ಇಂತಹ ಹೊತ್ತಿನಲ್ಲೇ, ಅಮೆಜಾನ್ ಕಂಪನಿಯು ರೋಬೋಟ್ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲಿದ್ದು, 5 ಲಕ್ಷ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
ಜಾಗತಿಕ ಇ-ಕಾಮರ್ಸ್ ದೈತ್ಯವಾಗಿರುವ ಅಮೆಜಾನ್, ಭವಿಷ್ಯದಲ್ಲಿ ವೇರ್ ಹೌಸ್ ಗಳು ಸೇರಿ ಕಂಪನಿಗಳ ಘಟಕಗಳಲ್ಲಿ ಶೇ.75ರಷ್ಟು ರೋಬೋಟ್ ಗಳನ್ನೇ ಬಳಸುವ ಗುರಿ ಹೊಂದಿದೆ. ಕೇವಲ ನಿರ್ವಹಣೆಗಾಗಿ ಮಾತ್ರ ಮನುಷ್ಯರನ್ನು ನೇಮಕಾತಿ ಮಾಡಿಕೊಳ್ಳಲಿದೆ. ಯಾವುದೇ ಉತ್ಪನ್ನಗಳನ್ನು ಪ್ಯಾಕ್ ಮಾಡುವುದು, ಲೋಡ್ ಮಾಡುವುದು, ಅನ್ ಲೋಡ್ ಮಾಡುವುದು ಸೇರಿ ವಿವಿಧ ಕೆಲಸಗಳನ್ನು ರೋಬೋಟ್ ಗಳಿಗೇ ವಹಿಸಲಿದೆ. ಇದರಿಂದಾಗಿ 2033ರ ವೇಳೆಗೆ 5 ಲಕ್ಷ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಹಣ ಉಳಿಸಲು ಮಾಸ್ಟರ್ ಪ್ಲಾನ್
ಪ್ಯಾಕಿಂಗ್, ಲೋಡಿಂಗ್ ಸೇರಿ ಹಲವು ಕೆಲಸಗಳಿಗೆ ಉದ್ಯೋಗಿಗಳನ್ನು ನೇಮಿಸುವುದರ ಬದಲಾಗಿ, ರೋಬೋಟ್ ಗಳನ್ನು ನಿಯೋಜಿಸಿದರೆ ಒಂದು ವಸ್ತುವಿನ ಮೇಲೆ ಕಂಪನಿಗೆ 26 ರೂ. ಉಳಿಯುತ್ತದೆ ಎಂದು ತಿಳಿದುಬಂದಿದೆ. ಹಾಗಾಗಿಯೇ, ಕಂಪನಿಯು ರೋಬೋಟ್ ಗಳನ್ನು ನಿಯೋಜಿಸಲು ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ. ಭಾರತದಲ್ಲೂ ಅಮೆಜಾನ್ ಕಂಪನಿಯ ಮಾರುಕಟ್ಟೆ ಪಾಲು ದೊಡ್ಡದಿರುವ ಕಾರಣ ಇಲ್ಲೂ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ
ರೋಬೋಟ್ ಗಳ ಬಳಕೆಯಿಂದಾಗಿ 2027ರ ವೇಳೆಗೆ ಅಮೆರಿಕದಲ್ಲಿಯೇ 1.6 ಲಕ್ಷಕ್ಕೂ ಹೆಚ್ಚು ಜನರನ್ನು ನೇಮಿಸಿಕೊಳ್ಳುವುದನ್ನು ತಪ್ಪಿಸಬಹುದು ಎಂದು ನಿರೀಕ್ಷಿಸಲಾಗಿದೆ. ರೋಬೋಟ್ ಗಳಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವೇ ದೊಡ್ಡ ಬಲವಾಗಿದೆ. ಹಾಗಾಗಿ, ರೋಬೋಟ್ ಗಳು ಇನ್ನಷ್ಟು ದಕ್ಷವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಈಗಾಗಲೇ ರೋಬೋಟ್ ಗಳನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದ್ದು, ಸಕಾರಾತ್ಮಕ ಸ್ಪಂದನೆಯೂ ದೊರೆತಿದೆ ಎನ್ನಲಾಗಿದೆ.



















