ಶ್ರೀನಗರ: ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಅಮರನಾಥ ಯಾತ್ರೆಯನ್ನು ಗುರುವಾರ ಸ್ಥಗಿತಗೊಳಿಸಲಾಗಿದೆ. ಪಹಲ್ಗಾಮ್ ಮತ್ತು ಬಲ್ತಾಲ್ ಎರಡೂ ಮೂಲ ಶಿಬಿರಗಳಿಂದ ಯಾತ್ರಿಕರ ಸಂಚಾರವನ್ನು ನಿಲ್ಲಿಸಲಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರಂತರ ಮಳೆಯಿಂದಾಗಿ ಯಾತ್ರಾ ಮಾರ್ಗದಲ್ಲಿ ತುರ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಶ್ಮೀರ ವಿಭಾಗೀಯ ಆಯುಕ್ತ ವಿಜಯ್ ಕುಮಾರ್ ಬಿಧುರಿ ತಿಳಿಸಿದ್ದಾರೆ. “ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಕಾರಣ, ಟ್ರ್ಯಾಕ್‌ಗಳಲ್ಲಿ ತುರ್ತು ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ. ಆದ್ದರಿಂದ, ಇಂದು ಯಾವುದೇ ಮೂಲ ಶಿಬಿರಗಳಿಂದ ಪವಿತ್ರ ಗುಹೆಯ ಕಡೆಗೆ ಯಾವುದೇ ಸಂಚಾರವನ್ನು ಅನುಮತಿಸದಿರಲು ನಿರ್ಧರಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ಆದಾಗ್ಯೂ, ಬಲ್ತಾಲ್ ಮೂಲ ಶಿಬಿರದಿಂದ ಯಾತ್ರಿಕರಿಗೆ ಕೆಳಗಿಳಿಯಲು ಅವಕಾಶ ನೀಡಲಾಗಿದೆ. ಈ ಪ್ರದೇಶದಲ್ಲಿ ಸಾಕಷ್ಟು ಭದ್ರತಾ ತಂಡಗಳನ್ನು ನಿಯೋಜಿಸಲಾಗಿದೆ. ಯಾತ್ರೆಯು ನಾಳೆ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ, ಆದರೆ ಹವಾಮಾನ ಪರಿಸ್ಥಿತಿಗಳನ್ನು ನೋಡಿಕೊಂಡು ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಮಹಿಳಾ ಯಾತ್ರಿಕರೊಬ್ಬರ ಸಾವು, ಮೂವರಿಗೆ ಗಾಯ
ಬುಧವಾರ ಗಂದರ್‌ಬಲ್ ಜಿಲ್ಲೆಯ ಬಲ್ತಾಲ್ ಮಾರ್ಗದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮಹಿಳಾ ಯಾತ್ರಿಕರೊಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಬುಧವಾರ ಸಂಜೆ ಪವಿತ್ರ ಗುಹೆಗೆ ಹೋಗುವ ಮಾರ್ಗದಲ್ಲಿ ಭೂಕುಸಿತ ಉಂಟಾಗಿ, ನಾಲ್ವರು ಯಾತ್ರಿಕರು ಕೆಳಕ್ಕೆ ಜಾರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ಮೂಲಕ ಪ್ರಸಕ್ತ ವರ್ಷದ ಅಮರನಾಥ ಯಾತ್ರೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿದೆ.
ಕಾಶ್ಮೀರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಾರ, ಪ್ರಸಕ್ತ ವರ್ಷ ಅಮರನಾಥ ಯಾತ್ರೆ ಆರಂಭವಾದ ಬಳಿಕ ಇದುವರೆಗೆ 2.47 ಲಕ್ಷಕ್ಕೂ ಹೆಚ್ಚು ಯಾತ್ರಿಗಳು ಪವಿತ್ರ ಗುಹಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.



















