ಹೈದರಾಬಾದ್: ನಟ ಅಲ್ಲು ಅರ್ಜುನ್ ವಿರುದ್ಧ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಪುಷ್ಪ-2 ಸಿನಿಮಾ ಪ್ರದರ್ಶನದ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದ್ದು, ಮಹಿಳೆ ಸಾವನ್ನಪ್ಪಿ, ಬಾಲಕ ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಧಿಸಿದಂತೆ ಈಗಾಗಲೇ ನಟ ಅಲ್ಲು ಅರ್ಜುನ್ ಬಂಧಿತರಾಗಿದ್ದರು. ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಆದರೆ, ಈಗ ಸಿಎಂ ವಾಗ್ದಾಳಿ ನಡೆಸಿದ್ದಾರೆ. ಮಹಿಳೆಯ ಸಾವಿಗೆ ನಟ ಅಲ್ಲು ಅರ್ಜುನ್ ಕಾರಣ ಎಂದು ಸಿಎಂ ಆರೋಪಿಸಿದ್ದಾರೆ.
ಪೊಲೀಸರು ಅನುಮತಿ ನಿರಾಕರಿಸಿದ್ದರೂ ತೆಲುಗು ನಟ ಅಲ್ಲು ಅರ್ಜುನ್ ಡಿ.4 ರಂದು ತಮ್ಮ ಚಿತ್ರ ಪುಷ್ಪ-2 ಪ್ರದರ್ಶನಕ್ಕೆ ಹಾಜರಾಗಿದ್ದರು. ಹೀಗಾಗಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ನಂತರವೂ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಲವಂತವಾಗಿ ಹೊರಗೆ ಕಳುಹಿಸುವವರೆಗೂ ಚಿತ್ರಮಂದಿರದಿಂದ ಹೊರ ಹೋಗಿಲ್ಲ ಎಂದು ರೆಡ್ಡಿ ಆರೋಪಿಸಿದ್ದಾರೆ.
ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಅವರು ವಿಧಾನಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ನಂತರ ರೆಡ್ಡಿ ಈ ಹೇಳಿಕೆ ನೀಡಿದ್ದಾರೆ. ಅಂದು ಅವರ ಸಿನಿಮಾ ಬಿಡುಗಡೆಯಾಗಿತ್ತು. ಹೀಗಾಗಿ ಜನ ಸಂದಣಿ ಉಂಟಾಗುತ್ತದೆ ಎಂಬ ಕಾರಣಕ್ಕೆ ಪೊಲೀಸರು ಅನುಮತಿ ನಿರಾಕಿಸಿದ್ದರು. ಆದರೂ ಅವರು ಚಿತ್ರ ಮಂದಿರಕ್ಕೆ ತೆರಳಿ ಮಹಿಳೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.