ಬೆಂಗಳೂರು : ಸಿನಿಮಾದ ಪ್ರೇರಣೆಯಿಂದ ರಕ್ತ ಚಂದನ ಮಾರಾಟಕ್ಕೆ ಮುಂದಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ.
ಆಂಧ್ರ ಮೂಲದ ಶೇಕ್ ಬಾ ಜಾನ್ (38) ಬಂಧಿತ ಆರೋಪಿಯಾಗಿದ್ದು, ಅವನಿಂದ ಸುಮಾರು 7 ಲಕ್ಷ ರೂಪಾಯಿ ಮೌಲ್ಯದ 285 ಕೆ.ಜಿ. ರಕ್ತ ಚಂದನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಗ್ರಾಹಕರಿಗೆ ತೋರಿಸಲು ಸ್ಯಾಂಪಲ್‌ನೊಂದಿಗೆ ಮಡಿವಾಳ ಪ್ರದೇಶಕ್ಕೆ ಬಂದಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ.
ಖಚಿತ ಮಾಹಿತಿಯ ಮೇರೆಗೆ ಪಿಎಸ್‌ಐ ರಮೇಶ್ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ವಿಚಾರಣೆ ವೇಳೆ, ಬನ್ನೇರಘಟ್ಟ ಸಮೀಪದ ಶ್ಯಾನಬೋಗನಹಳ್ಳಿ ಪ್ರದೇಶದಲ್ಲಿರುವ ಗೋದಾಮಿನಲ್ಲಿ ರಕ್ತ ಚಂದನವನ್ನು ಸಂಗ್ರಹಿಸಿದ್ದಾಗಿ ಆರೋಪಿ ಮಾಹಿತಿ ನೀಡಿದ್ದಾನೆ.
ಪೊಲೀಸರು ಸ್ಥಳಕ್ಕೆ ತೆರಳಿ ರಕ್ತ ಚಂದನವನ್ನು ವಶಪಡಿಸಿಕೊಂಡಿದ್ದಾರೆ. ಈ ಕಳ್ಳಸಾಗಣೆ ಜಾಲದ ಹಿಂದೆ ಇನ್ನೂ ಅನೇಕರು ಇರುವ ಶಂಕೆ ವ್ಯಕ್ತವಾಗಿದ್ದು, ಇತರೆ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.
ಇದನ್ನೂ ಓದಿ : ಬೆಳಿಗ್ಗೆ ವೆಲ್ಡಿಂಗ್ ಕೆಲಸ, ರಾತ್ರಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಖದೀಮ ಅರೆಸ್ಟ್!


















