ಮೈಸೂರು: ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಅಧಿಕಾರಿಗಳು ‘ಫೋನ್ಪೇ’ ಮೂಲಕ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಮೂವರು ಕಂದಾಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಚ್.ಡಿ. ಕೋಟೆ ತಾಲೂಕಿನ ತಹಶೀಲ್ದಾರ್ ಶ್ರೀನಿವಾಸ್, ಅಂತರಸಂತೆ ಕಂದಾಯ ನಿರೀಕ್ಷಕ ಗೋವಿಂದರಾಜು, ಎನ್.ಬೆಳತ್ತೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ನಾಗರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಎಚ್.ಡಿ. ಕೋಟೆಯ ಬಿ.ವಿ.ಮಮತಾ ಕುಮಾರಿ ಅವರ ದೂರಿನ ಆಧಾರದ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
5 ಎಕರೆ 1 ಗುಂಟೆ ಭೂಮಿಯನ್ನು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಧಿಕಾರಿಗಳು ಆಸ್ತಿ ಪರಭಾರೆ ಮಾಡಿದ್ದರು. ಆಸ್ತಿ ಹಂಚಿಕೆ ಮಾಡಿ ಮಾರಾಟ ಮಾಡಲು ಹಾಗೂ ಹಿಂದಿನಂತೆ ದಾಖಲೆಗಳನ್ನು ಯಥಾಸ್ಥಿತಿ ಕಾಪಾಡಿಕೊಳ್ಳಲು ಲಂಚಕ್ಕೆ ಬೇಟಿಕೆ ಇಟ್ಟಿದ್ದರು. ಈ ವಿಚಾರವಾಗಿ ಮೊದಲ ಹಂತದಲ್ಲಿ 5 ಸಾವಿರ ಫೋನ್ ಪೇ ಮೂಲಕ ಲಂಚ ಪಡೆದಿದ್ದರು. ಹೀಗಾಗಿ ದೂರು ದಾಖಲಾಗಿದೆ.