ಬೆಂಗಳೂರು : ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಚಿಕ್ಕಕಲ್ಲಸಂದ್ರ ಗ್ರಾಮದಲ್ಲಿರುವ ಅಮೂಲ್ಯ ಸರ್ಕಾರಿ ಕೆರೆ ಜಾಗವನ್ನು ಅಕ್ರಮವಾಗಿ ಕಬಳಿಸಿ ಬೃಹತ್ ಕಟ್ಟಡಗಳನ್ನು ನಿರ್ಮಿಸಿರುವ ಕುರಿತು ಗಂಭೀರ ಆರೋಪ ಕೇಳಿಬಂದಿದೆ.

ಸರ್ವೆ ನಂ. 76ರಲ್ಲಿ ಇರುವ ಸುಮಾರು 12.26 ಎಕರೆ ವಿಸ್ತೀರ್ಣದ ಚಿಕ್ಕಕಲ್ಲಸಂದ್ರ ಕೆರೆಯು ಸುಮಾರು 1,200 ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿದೆ ಎಂದು ಹೇಳಲಾಗಿದೆ. ಈ ಕೆರೆಯನ್ನು ಕಬಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಿಬಿಎಂಪಿ ಮಾಜಿ ಸದಸ್ಯ ಎಲ್. ಶ್ರೀನಿವಾಸ್ ಮತ್ತು ಅವರ ಕುಟುಂಬದ ವಿರುದ್ಧವೂ ಹಲವು ದೂರುಗಳು ದಾಖಲಾಗಿದ್ದವು ಎನ್ನಲಾಗಿದೆ. ಇದೀಗ, 2026ರ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಪದ್ಮನಾಭನಗರ ವಾರ್ಡ್‌ನ ಮಾಜಿ ಸದಸ್ಯೆ ಶೋಭ ಆಂಜನಪ್ಪ ಅವರ ಪತಿ ಆಂಜನಪ್ಪ ಹಾಗೂ ಅವರ ಬಂಧುಗಳಾದ ಕಿರಣ್ ನಾಗರಾಜ್ ಮತ್ತು ರಕ್ಷಿತ್ ನಾಗರಾಜ್, ರಾತ್ರೋರಾತ್ರಿ ಎರಡು ಬೃಹತ್ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರಭಾವಶಾಲಿಗಳಾಗಿರುವ ಆರೋಪಿಗಳ ವಿರುದ್ಧ ಸ್ಥಳೀಯ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂಬ ಆರೋಪವೂ ವ್ಯಕ್ತವಾಗಿದೆ.
ಈ ಕುರಿತು ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿಯ ಉಪಾಧ್ಯಕ್ಷ ಗಣೇಶ್ ಸಿಂಗ್ ಬಿ. ಅವರು ದಾಖಲೆಗಳ ಸಹಿತ ಲೋಕಯುಕ್ತ.ಹಾಗೂ ಬಿಎಂಟಿಎಫ್‌ನಲ್ಲಿ ದೂರು ಸಲ್ಲಿಸಿದ್ದಾರೆ. ಸುಮಾರು 1,200 ಕೋಟಿಗೂ ಅಧಿಕ ಮೌಲ್ಯದ ಸರ್ಕಾರಿ ಸ್ವತ್ತನ್ನು ಕಬಳಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ (BMTF) ನ ಅಪರ ಪೊಲೀಸ್ ಮಹಾನಿರ್ದೇಶಕರಿಗೂ ಹಾಗೂ ಲೋಕಾಯುಕ್ತದ ADGP ಅವರಿಗೂ ಪ್ರತ್ಯೇಕ ದೂರುಗಳನ್ನು ಸಲ್ಲಿಸಲಾಗಿದೆ. ಸರ್ಕಾರಿ ಕೆರೆ ಜಾಗದ ಕಬಳಿಕೆ ಹಾಗೂ ಅಕ್ರಮ ಕಟ್ಟಡ ನಿರ್ಮಾಣದ ಆರೋಪಗಳು ಗಂಭೀರವಾಗಿದ್ದು, ಸಂಬಂಧಿತ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಸಾರ್ವಜನಿಕರ ಆಗ್ರಹ ವ್ಯಕ್ತವಾಗಿದೆ.
ಇದನ್ನೂ ಓದಿ : ಜಿಬಿಎ ಮುಖ್ಯ ಆಯುಕ್ತರ ಭಾವಚಿತ್ರ ದುರ್ಬಳಕೆ – ವಾಟ್ಸ್‌ಆ್ಯಪ್‌ನಲ್ಲಿ ನಕಲಿ ಖಾತೆ ಸೃಷ್ಟಿ


















