ಬೆಂಗಳೂರು: ಕನ್ನಡ ಕಿರುತೆರೆಯ ನಿರ್ದೇಶಕ ಹಾಗೂ ನಿರ್ಮಾಪಕ ಕೆ.ಎಸ್. ರಾಮಜೀ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈಗ ರಾಮಜೀ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ‘ಎಕ್ಸ್ಪೋಸಿಂಗ್ ಕೆಎಸ್ ರಾಮಜೀ’ ಹೆಸರಿನ ಪೇಜ್ ತೆರೆದು, ಲೈಂಗಿಕ ದೌರ್ಜನ್ಯ ಆರೋಪಗಳನ್ನು ಮಾಡಲಾಗುತ್ತಿದೆ. ಧಾರಾವಾಹಿಯಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಯುವತಿಗೆ ಮೋಸ ಮಾಡಿದ್ದಾರೆ. ಆ ಯುವತಿ ತನಗಾದ ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದು, ಸುದ್ದಿ ವಾಹಿನಿಗಳ ಬಳಿ ಹೋಗಿದ್ದರು. ನ್ಯಾಯಾಲಯದ ಮೊರೆ ಹೋಗಿರುವ ರಾಮಜೀ ಕಾರ್ಯಕ್ರಮ ಪ್ರಸಾರ ಮಾಡದಂತೆ ತಡೆ ತಂದಿದ್ದಾರೆ’ ಎಂಬ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ.
ಈಗ ರಾಮಜೀ ತಮ್ಮ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಯಾವ ಯುವತಿಗೂ ಲೈಂಗಿಕ ಕಿರುಕುಳ ನೀಡಿಲ್ಲ. ಯಾವುದೇ ಅಪರಾಧ ಮಾಡಿಲ್ಲ. ಆದರೂ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಹೀಗಾಗಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಮನವಿ ಮಾಡಿದ್ದಾರೆ.
ಕೆ.ಎಸ್. ರಾಮಜೀ, ‘ಪುಟ್ಟಗೌರಿ ಮದುವೆ’, ‘ಗೀತಾ’, ‘ನಾಗಿಣಿ 2’, ‘ರಾಮಾಚಾರಿ’ ಸೇರಿದಂತೆ ಹಲವು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದಾರೆ.