ಬೆಂಗಳೂರು: ಬಿಬಿಎಂಪಿ ಸಹಾಯಕ ಅಯುಕ್ತರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ.
ಅಸ್ತಿ ವಿಭಾಗದ ಸಹಾಯಕ ಅಯುಕ್ತ ಶ್ರೀನಿವಾಸ ಮೂರ್ತಿ ವಿರುದ್ಧ ಬಿಬಿಎಂಪಿ ಕೇಂದ್ರ ಕಚೇರಿಯ ಸಿಬ್ಬಂದಿಗಳು ಈ ಕುರಿತು ಆರೋಪ ಮಾಡಿದ್ದಾರೆ. ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ವಿಶೇಷ ಅಯುಕ್ತರಿಗೆ ಸಿಬ್ಬಂದಿಗಳು ಪತ್ರ ಬರೆದಿದ್ದಾರೆ.
ಪಾಲಿಕೆ ಕೇಂದ್ರ ಕಚೇರಿಯ ಅಸ್ತಿಗಳ ವಿಭಾಗದ ಸಹಾಯಕ ಅಯುಕ್ತರ ಮೇಲೆಯೇ ಈ ರೀತಿ ಆರೋಪ ಮಾಡಲಾಗಿದೆ. ಹಿರಿಯ ಅಧಿಕಾರಿಗಳಿಗೆ ಈ ಕುರಿತು ಎರಡ್ಮೂರು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಈ ಹಿಂದೆ ಪಾಲಿಕೆ ನೌಕರರ ಸಂಘದ ಮೂಲಕ ರಾಜಿ ಸಂಧಾನ ಕೂಡ ಅಗಿತ್ತು. ರಾಜಿ ಸಂಧಾನದ ವೇಳೆ ಶ್ರೀನಿವಾಸ ಮೂರ್ತಿ ಗೆ ವಾರ್ನಿಂಗ್ ಕೂಡ ಮಾಡಿದ್ದರು. ಅದರೂ ಸಹಾಯಕ ಅಯುಕ್ತ ಅದೇ ಚಾಳಿ ಮುಂದುವರೆಸಿದ್ದಾನೆ.
ಸಹಾಯಕ ಅಯುಕ್ತ ಶ್ರೀನಿವಾಸ ಮೂರ್ತಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ. ಕೊಠಡಿಗೆ ಕರೆಯಿಸಿ ಲೈಂಗಿಕ ನಿಂದನೆ ಮಾಡುತ್ತಿದ್ದಾನೆ. ಅಲ್ಲದೇ, ಸಿಬ್ಬಂದಿಗಳ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಚಾಡಿ ಹೇಳುತ್ತಾನೆ. ಈ ಬಗ್ಗೆ ಅಯುಕ್ತರ ಗಮನಕ್ಕೆ ತಂದರೆ, ನಿಮ್ಮ ಸೇವಾ ಪುಸ್ತಕದಲ್ಲಿ ರೀ ಮಾರ್ಕ್ ಬರೆಯುತ್ತೇನೆ ಅಂತಾ ಬೆದರಿಕೆ ಹಾಕುತ್ತಾನೆ. ಪ್ರತಿನಿತ್ಯ ಮಹಿಳಾ ಸಿಬ್ಬಂದಿಯನ್ನು 10ಕ್ಕೂ ಅಧಿಕ ಬಾರಿ ಕೊಠಡಿಗೆ ಕರೆಯಿಸಿ, ಲೈಂಗಿಕವಾಗಿ ನಿಂದನೆ, ಅನಾವಶ್ಯಕ ಹಾಗೂ ಆಸಂಬದ್ಧವಾಗಿ ಮಾತನಾಡುತ್ತಾನೆ. ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಾನೆ. ಏರು ಧ್ವನಿಯಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಸಾರ್ವಜನಿಕರ ಮುಂದೆ ಸಿಬ್ಬಂದಿಗಳನ್ನು ಹೀಯಾಳಿಸುತ್ತಾನೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ದೌರ್ಜನ್ಯ ಎಸಗುತ್ತಿದ್ದಾನೆ ಎಂದು ಸಿಬ್ಬಂದಿಗಳು ದೂರು ಸಲ್ಲಿಸಿದ್ದಾರೆ. ಹೀಗಾಗಿ ಸಹಾಯಕ ಅಯುಕ್ತ ಶ್ರೀನಿವಾಸ ಮೂರ್ತಿಯನ್ನು ಬೇರೆಡೆ ವರ್ಗಾವಣೆ ಮಾಡಬೇಕೆಂದು ಸಿಬ್ಬಂದಿ ಪತ್ರದಲ್ಲಿ ಮನವಿ ಮಾಡಿದ್ದಾರೆ.