ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ದಕ್ಷಿಣ ಆಫ್ರಿಕಾದ ಮೂವರು ಆಟಗಾರರನ್ನು ಬಂಧಿಸಿರುವ ಘಟನೆ ನಡೆದಿದೆ.
100 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದ ಮಾಜಿ ಅನುಭವಿ ಆಟಗಾರ, ಬೌಲರ್ ಲೊನ್ವಾಹೊ ತ್ಸೊಟ್ಸೊಬೆ ಸೇರಿದಂತೆ ಇಬ್ಬರು ಮಾಜಿ ಆಟಗಾರರನ್ನು ಬಂಧಿಸಲಾಗಿದೆ. ದಕ್ಷಿಣ ಆಫ್ರಿಕಾದ ಆದ್ಯತಾ ಅಪರಾಧ ತನಿಖಾ ನಿರ್ದೇಶನಾಲಯ (ಡಿಪಿಸಿಐ) ಒಂಬತ್ತು ವರ್ಷಗಳ ಹಿಂದಿನ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಇವರನ್ನು ಬಂಧಿಸಿದೆ.
ತಮ್ಸಂಕಾ ಸೊಲೆಕಿಲೆ ಮತ್ತು ಮಭಾಲಟಿ ಕೂಡ ಅರೆಸ್ಟ್ ಆದವರಲ್ಲಿದ್ದಾರೆ. ಸೊಲೆಕಿಲ್ ದಕ್ಷಿಣ ಆಫ್ರಿಕಾ ಪರ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 160 ಪ್ರಥಮ ದರ್ಜೆ ಪಂದ್ಯವಾಡಿದ್ದಾರೆ. ಮಭಾಲಟಿ ದಕ್ಷಿಣ ಆಫ್ರಿಕಾ ಪರ ಒಂದೇ ಒಂದು ಪಂದ್ಯವನ್ನಾಡದಿದ್ದರೂ, ದೇಶೀಯ ಕ್ರಿಕೆಟ್‌ನಲ್ಲಿ 129 ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ.
ಈ ಮೂವರೂ ಪಂದ್ಯಾವಳಿಯಲ್ಲಿ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆ ನಂತರ ದಕ್ಷಿಣ ಆಫ್ರಿಕಾ ಈ ಮೂವರು ಆಟಗಾರರನ್ನು ಅಮಾನತುಗೊಳಿಸಿತು. ಮಭಾಲಟಿ ಅವರನ್ನು ನವೆಂಬರ್ 18 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆಯನ್ನು 20 ಫೆಬ್ರವರಿ 2025 ಕ್ಕೆ ಮುಂದೂಡಲಾಗಿದೆ.
ಎಡಗೈ ವೇಗದ ಬೌಲರ್ ಲೊನ್ವಾಬೊ ಸೋತ್ಸೋಬೆ ಎಲ್ಲಾ ಮೂರು ಸ್ವರೂಪಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ್ದರು. ಆಫ್ರಿಕಾ ಪರ 61 ಏಕದಿನ ಪಂದ್ಯಗಳನ್ನಾಡಿರುವ ಸೋತ್ಸೋಬೆ 94 ವಿಕೆಟ್ ಪಡೆದಿದ್ದಾರೆ.