ಪ್ರತಾಪಘಡ: ಅಕ್ರಮ ಸಂಬಂಧ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಅವರ ಮಕ್ಕಳ ಎದುರೇ ಕ್ರೂರವಾಗಿ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದೆ.
ಈ ಕ್ರೌರ್ಯಕ್ಕೆ ಪಂಚಾಯತ್ ಸೂಚಿಸಿತ್ತು ಎಂದು ತಿಳಿದು ಬಂದಿದೆ. ಈ ಘಟನೆ ಉತ್ತರ ಪ್ರದೇಶದ ಚೋಟ್ಕಿ ಇಬ್ರಾಹಿಂಪುರದಲ್ಲಿ ನಡೆದಿದೆ. ಮಹಿಳೆಯ ಪತಿ ಮುಂಬೈನಲ್ಲಿ ಇರುವ ಹಿನ್ನೆಲೆಯಲ್ಲಿ ಮಹಿಳೆ ಅದೇ ಗ್ರಾಮದ ವ್ಯಕ್ತಿಯೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ರೀತಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಮಹಿಳೆಯನ್ನು ಆಕೆಯ ಮಕ್ಕಳ ಮುಂದೆ ಮರಕ್ಕೆ ಕಟ್ಟಿ ಹಾಕಿ, ಮುಖಕ್ಕೆ ಮಸಿ ಬಳಿದು, ಕೂದಲು ಕತ್ತರಿಸಲಾಗಿದೆ. ಚಪ್ಪಲಿ ಹಾರ ಹಾಕಿ ಹಲ್ಲೆ ನಡೆಸಲಾಗಿದೆ. ಪತಿ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ವಿಷಯ ತಿಳಿಯುತ್ತಿದ್ದಂತೆ ಆತ ಮುಂಬೈನಿಂದ ಮರಳಿ ಬಂದಿದ್ದಾನೆ. ನಂತರ ಗ್ರಾಮಸ್ಥರು ಪಂಚಾಯಿತಿ ನಡೆಸಿ, ಹಲ್ಲೆಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ವ್ಯಕ್ತಿಯೊಬ್ಬ ರಕ್ಷಿಸಲು ಮುಂದಾಗಿದ್ದು, ಆತನ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮಹಿಳೆ ಮೇಲೆ 20ಕ್ಕೂ ಹೆಚ್ಚು ಮಂದಿ ಈ ಕ್ರೌರ್ಯ ಮೆರೆದಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಪ್ರಕರಣ ದಾಖಲಿಸಿ 15 ಜನರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.