ಹಾವೇರಿ: ರಾಜ್ಯದಲ್ಲಿನ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಬಹಿರಂಗ ಪ್ರಚಾರ ಕೂಡ ಅಂತ್ಯವಾಗಿದೆ. ಈ ಮಧ್ಯೆ ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ (Yasir khan Pathan) ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಪಠಾಣ್ ಅವರು ತಮ್ಮ ಮೇಲಿರುವ ಪೊಲೀಸ್ ಕೇಸ್ಗಳನ್ನು ನಾಮಪತ್ರದಲ್ಲಿ ಉಲ್ಲೇಖಿಸಿಲ್ಲ ಎನ್ನಲಾಗಿದೆ. ನಾಮಪತ್ರದಲ್ಲಿ ತಮ್ಮ ವಿರುದ್ಧ ಯಾವುದೇ ಪ್ರಕರಣಗಳು ಇಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಈಗ ಪಠಾಣ್ ಓರ್ವ ರೌಡಿಶೀಟರ್ ಎಂಬ ಬಗ್ಗೆ ಚರ್ಚೆ ನಡೆದಿದೆ. ಇದರ ಮಧ್ಯ ಖುದ್ದು ಹಾವೇರಿ ಎಸ್ಪಿ ಪಠಾಣ್ ಮೇಲೆ ರೌಡಿಶೀಟರ್ ಪ್ರಕರಣ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಕಾನೂನು ಸಮರಕ್ಕೆ ಬಿಜೆಪಿ ಮುಂದಾಗಿದೆ.
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಚುನಾವಣಾಧಿಕಾರಿಗಳು ಪಕ್ಷಪಾತ ಮಾಡಿದ್ದಾರೆ. ಹೀಗಾಗಿ ನಾವು ರಾಜ್ಯ ಹಾಗೂ ಕೇಂದ್ರ ಚುನಾವಣೆಗೆ ಅರ್ಜಿ ಸಲ್ಲಿಸುತ್ತೇವೆ. ಕೂಡಲೇ ಚುನಾವಣಾಧಿಕಾರಿಗಳು ಕಾರ್ಯ ಪ್ರವೃತ್ತರಾಗಲಿ. ಜಿಲ್ಲಾಧಿಕಾರಿ ಮೇಲೆ ದೊಡ್ಡ ಜವಾಬ್ದಾರಿ ಇದೆ. ಎಸ್ಪಿ ಈ ಕುರಿತು ಸ್ಪಷ್ಟ ಪಡಿಸಲಿ ಎಂದಿದ್ದಾರೆ. ಕಳೆದ ಬಾರಿಯ ಚುನಾವಣೆ ವೇಳೆ ಅವರ ಮೇಲೆ 17 ಕೇಸ್ ಗಳಿದ್ದವು ಎಂದು ಉಲ್ಲೇಖಿಸಲಾಗಿತ್ತು. ಆದರೆ, ಬರೀ ಒಂದೂವರೆ ವರ್ಷದಲ್ಲಿ ಎಲ್ಲ ಕೇಸ್ ಗಳು ಕ್ಲೋಸ್ ಆಗಿದ್ದಾವೆಯೇ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಆದರೆ, ಕೈ ಅಭ್ಯರ್ಥಿ ಮಾತ್ರ. ಇದು ಚುನಾವಣೆಯ ಗಿಮಿಕ್. ಸೋಲುವ ಹತಾಶೆಯಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.