ಬೆಂಗಳೂರು: ಕೇಂದ್ರ ಸರ್ಕಾರದ ಬೆಂಬಲ ಇರುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು (NPS) ಜಾರಿಯಾದಾಗಿನಿಂದ ಇದುವರೆಗೆ ವರ್ಷಕ್ಕೆ ಶೇ.13ರಷ್ಟು ರಿಟರ್ನ್ಸ್ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲ ದಿನಗಳ ಹಿಂದಷ್ಟೇ ಹೇಳಿದ್ದಾರೆ. ಹಾಗೆಯೇ, ಎನ್ ಪಿ ಎಸ್ ನಲ್ಲಿ ಹೂಡಿಕೆ ಮಾಡುತ್ತಿರುವ ಖಾಸಗಿ ನೌಕರರ ಸಂಖ್ಯೆಯೂ ಜಾಸ್ತಿಯಾಗಿದೆ ಎಂದಿದ್ದಾರೆ. ಹಾಗಾದರೆ, ಏನಿದು ಎನ್ ಪಿ ಎಸ್ ಹೂಡಿಕೆ ಯೋಜನೆ? ಇದರ ರಿಟರ್ನ್ಸ್ ಹೇಗಿರತ್ತೆ? ಯೋಜನೆಯಿಂದ ಏನೆಲ್ಲ ಲಾಭಗಳಿವೆ? ತಿಳಿಯೋಣ ಬನ್ನಿ
“ಏನಿದು ಎನ್ ಪಿ ಎಸ್”?
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ದೇಶದ ಸರ್ಕಾರಿ ಹಾಗೂ ಖಾಸಗಿ ನೌಕರರು ನಿವೃತ್ತಿಗಾಗಿ ನಿಧಿ ರೂಪಿಸುವ ಜನಪ್ರಿಯ ಯೋಜನೆಯಾಗಿದೆ. ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ದೇಶದ ನಾಗರಿಕರು ಎನ್ ಪಿ ಎಸ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಇದು ಮಾರುಕಟ್ಟೆ ಆಧಾರಿತ ಯೋಜನೆಯಾಗಿದ್ದು, ನಿವೃತ್ತಿ ಬಳಿಕ ಪಿಂಚಣಿ ಪಡೆಯಲು ಉತ್ತಮ ಯೋಜನೆ ಎನಿಸಿದೆ.
“ಯಾರೆಲ್ಲ ಎನ್ ಪಿ ಎಸ್ ಗೆ ಅರ್ಹರು”?
ದೇಶದ 18ರಿಂದ 70 ವರ್ಷದೊಳಗಿನ ಯಾರು ಬೇಕಾದರೂ ಎನ್ ಪಿ ಎಸ್ ನಲ್ಲಿ ಹೂಡಿಕೆ ಮಾಡಬಹುದಾಗಿದೆ. ಎನ್ ಪಿ ಎಸ್ ನಲ್ಲೇ ಟೈರ್ 1 ಹಾಗೂ ಟೈರ್ 2 ಎಂಬ ಎರಡು ವಿಭಾಗಗಳಿವೆ. ಎನ್ ಪಿ ಎಸ್ ನಲ್ಲಿ 60 ವರ್ಷಗಳ ಲಾಕ್ ಇನ್ ಪೀರಿಯಡ್ ಇರುತ್ತದೆ. ಟೈರ್ 2 ನಲ್ಲಿ ಹೂಡಿಕೆ ಮಾಡಿದರೆ ಯಾವಾಗ ಬೇಕಾದರೂ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಬಹುದಾಗಿದೆ.
ಕನಿಷ್ಠ 500 ರೂಪಾಯಿಯಿಂದ ಹೂಡಿಕೆ ಮಾಡಬಹುದಾಗಿದೆ. ಉದಾಹರಣೆ ಸಮೇತ ನೋಡುವುದಾದರೆ, ಎನ್ ಪಿ ಎಸ್ ನಲ್ಲಿ ನೀವು ಮಾಸಿಕ 2 ಸಾವಿರ ರೂ.ನಂತೆ 20 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ಶೇ.13ರ ರಿಟರ್ನ್ಸ್ ಲೆಕ್ಕಾಚಾರದಲ್ಲಿ ಒಟ್ಟು 3.23 ಕೋಟಿ ರೂ. ಗಳಿಸಬಹುದಾಗಿದೆ. ನಿಮಗೇನಾದರೂ 40 ವರ್ಷ ಆಗಿದ್ದರೆ, 60 ವರ್ಷಗಳವರೆಗೆ ಹೂಡಿಕೆ ಮಾಡಬಹುದಾಗಿದೆ. 60 ವರ್ಷದ ಬಳಿಕ ನೀವು ಒಮ್ಮೆಯೇ ಶೇ.60ರಷ್ಟು ಹಣ ವಾಪಸ್ ಪಡೆಯಬಹುದು. ಉಳಿದ ಮೊತ್ತವನ್ನು ಪಿಂಚಣಿಯಾಗಿ ಮಾಸಿಕ ನೀಡಲಾಗುತ್ತದೆ.
“ಗಮನಿಸಿ”
ಎನ್ ಪಿ ಎಸ್ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನವನ್ನು ಪ್ರಕಟಿಸಲಾಗಿದೆ. ಇದು ನೀವು ಹೂಡಿಕೆ ಮಾಡಲು ಶಿಫಾರಸು ಅಲ್ಲ. ಯಾವುದೇ ಮಾದರಿಯ ಹೂಡಿಕೆಗಾಗಿ ತಜ್ಞರನ್ನು ಸಂಪರ್ಕಿಸುವುದನ್ನು ಮರೆಯದಿರಿ. ಓದುಗರಿಗೆ ಯೋಜನೆ ಕುರಿತು ಮಾಹಿತಿ ನೀಡುವುದಷ್ಟೇ ನಮ್ಮ ಉದ್ದೇಶ.