ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಚಿಕ್ಕಬಳ್ಳಾಪುರ ಸಂಸದ ಕೆ. ಸುಧಾಕರ್ (Sudhakar) ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ (Preetham Gowda) ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ ಎಂಬುವುದು ಬಿಜೆಪಿ (BJP) ಕಾರ್ಯಕರ್ತರಿಗೆ ಗೊತ್ತಿದೆ. ಬಿಜೆಪಿಯಲ್ಲಿ ಜಿಪಿಎ ವ್ಯವಸ್ಥೆ ಇಲ್ಲ. ಸುಧಾಕರ್ ಅವರು ಚಿಕ್ಕಬಳ್ಳಾಪುರ ಸಂಸದರಾದ್ದಾರೆ ಎಂಬ ಮಾತ್ರಕ್ಕೆ ಚಿಕ್ಕಬಳ್ಳಾಪುರವನ್ನು ಅವರಿಗೆ ಬರೆದುಕೊಟ್ಟಿಲ್ಲ. ಅವರು ಪಕ್ಷಕ್ಕೆ ಬಂದು ಐದು ವರ್ಷ ಅಷ್ಟೇ ಆಗಿದೆ. ಇಡೀ ಪಕ್ಷ ತಾವು ಹೇಳಿದಂತೆ ಕೇಳಬೇಕು ಎಂಬ ಮನಸ್ಥಿತಿಯಿಂದ ಹಿಂದೆ ಸರಿಯಬೇಕು.
ಸುಧಾಕರ್ಗೆ ಈ ಐದು ವರ್ಷದಲ್ಲಿ ಮೂರು ಸಲ ಪಕ್ಷ ಬಿ ಫಾರಂ ಕೊಟ್ಟಿದೆ. ನಾಲ್ಕು ವರ್ಷ ಮಂತ್ರಿ ಮಾಡಿದೆ. ಶಾಸಕರಾಗಿ, ಮಂತ್ರಿಯಾಗಿ, ಸಂಸದರಾಗಿ ಅಧಿಕಾರ ಅನುಭವಿಸಿದ್ದಾರೆ. ಅವರ ಮಾತುಗಳನ್ನು ಗಮನಿಸಿದರೆ, ಈಗ ಅವರಿಗೆ ರಾಜ್ಯಾಧ್ಯಕ್ಷರಾಗಿ, ಸಿಎಂ ಆಗಬೇಕು ಎಂಬ ಭಾವನೆ ಇದ್ದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ವಿಜಯೇಂದ್ರ ಶಕ್ತಿ ಬಗ್ಗೆ ಸುಧಾಕರ್ ಮಾತನಾಡುವುದು ಬೇಡ. ಅವರ ಮಾತಿನ ರೀತಿ ಸರಿಯಿಲ್ಲ. ಸೋತಿದ್ದ ಸುಧಾಕರ್ಗೆ ಪಕ್ಷ ಮತ್ತೆ ಕೈ ಹಿಡಿದು ಎಂಪಿ ಸೀಟು ಕೊಟ್ಟಿದೆ. ಸರ್ವಾಧಿಕಾರಿ ಧೋರಣೆ ನಮ್ಮ ಪಕ್ಷದಲ್ಲಿ ನಡೆಯಲ್ಲ. ಸುಧಾಕರ್ ಪಕ್ಷದ ವ್ಯವಸ್ಥೆ ಅರ್ಥಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಧಾಕರ್ ಆಗಲೀ, ನಾನಾಗಲಿ ಕಾರ್ಯಕರ್ತರಿದ್ದಂತೆ. ಕಾರ್ಯಕರ್ತರು ಕಾರ್ಯಕರ್ತರಂತೆ ಇರಬೇಕು. ಯಡಿಯೂರಪ್ಪ ಬಗ್ಗೆ ಮಾತನಾಡಿದ್ದು ಸರಿಯಲ್ಲ. ಮಾತಿನ ಶೈಲಿ ಬದಲಾಯಿಸಿಕೊಳ್ಳಬೇಕು ಮಿಸ್ಟರ್ ಸುಧಾಕರ್ ಎಂದು ಗುಡುಗಿದ್ದಾರೆ.
ಜಿಲ್ಲೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲಿಸಿಕೊಳ್ಳಲು ಸುಧಾಕರ್ ಗೆ ಆಗಲಿಲ್ಲ. ವರಿಷ್ಠರು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಸುಧಾಕರ್ ಇದನ್ನು ಅರ್ಥ ಮಾಡಿಕೊಳ್ಳಬೇಕು. ಬೇರೆಯವರಿಗೆ ಅವಕಾಶ ಕೊಟ್ಟಾಗ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.