ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ವಿರುದ್ಧ ಸೆಡ್ಡು ಹೊಡೆದ ರೆಬೆಲ್ಸ್ ಟೀಂ ಯತ್ನಾಳ್ ಗೆ ಆಲ್ ದಿ ಬೆಸ್ಟ್ ಹೇಳಿ, ಸಂಸದ ಸುಧಾಕರ್ ವಿರುದ್ಧ ಗುಡುಗಿದ್ದಾರೆ.
ಜಿಲ್ಲಾ ಅಧ್ಯಕ್ಷರುಗಳ (BJP District President) ನೇಮಕಾತಿಯಲ್ಲಿ ವಿಜಯೇಂದ್ರ (BY Vijayendra) ಹಸ್ತಕ್ಷೇಪ ಮಾಡಿದ್ದಾರೆ. ನಮ್ಮ ಮಾತು ಪರಿಗಣಿಸಿಲ್ಲ ಎಂದು ಸಂಸದ ಡಾ. ಕೆ. ಸುಧಾಕರ್ (Dr K. Sudhakar) ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ವಿಜಯೇಂದ್ರ, ರಾಜ್ಯದ ಅಧ್ಯಕ್ಷನಾಗಿ ನಾನು ಯಾವುದೇ ಅಧ್ಯಕ್ಷರ ಆಯ್ಕೆಯಲ್ಲಿ ನಾನು ಮೂಗು ತೂರಿಸಲು ಹೋಗಿಲ್ಲ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ (Captain Ganesh Karnik) ಚುನಾವಣಾಧಿಕಾರಿ ಆಗಿದ್ದರು. 13 ಜನ ವೀಕ್ಷಕರು ಇದ್ದರು. ಅವರೇ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆದರೆ, ನನ್ನ ಅಭಿಪ್ರಾಯವನ್ನು ನಾನು ಎಂದಿಗೂ ಹೇರಿಲ್ಲ ಎಂದಿದ್ದಾರೆ.
ಸುಧಾಕರ್ ಹೀಗೆ ಮಾತಾಡಬಾರದು
ನನ್ನ ಜಿಲ್ಲೆಗೆ ನಾನು ಅಭಿಪ್ರಾಯ ಕೊಡಬಹುದೇ ಹೊರತು, ಬೇರೆ ಜಿಲ್ಲೆಗೆ ಅಭಿಪ್ರಾಯ ಕೊಡಲು ಆಗುವುದಿಲ್ಲ. ವಿಜಯೇಂದ್ರ ನನ್ನನ್ನು ರಾಜಕೀಯ ಸಮಾಧಿ ಮಾಡಲು ಹೊರಟಿದ್ದಾರೆ ಅಂತ ಸುಧಾಕರ್ ಹೇಳಿದ್ದಾರೆ, ಸುಧಾಕರ್ ಅವರು ಹಿರಿಯರು ಹೀಗೆಲ್ಲ ಮಾತನಾಡಬಾರದು ಎಂದಿದ್ದಾರೆ. ಅಂತಹ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ. ನಾನು ಸುಧಾಕರ್ ಅವರನ್ನೂ ಭೇಟಿ ಮಾಡುತ್ತೇನೆ. ನನ್ನ ಮೇಲೆ ಸುಧಾಕರ್ ಆರೋಪ ಮಾಡುವುದು ಸರಿಯಲ್ಲ. ಸುಧಾಕರ್ ಅನ್ಯಥಾ ಭಾವಿಸಬಾರದು, ತಪ್ಪು ತಿಳಿಯಬಾರದು ಎಂದು ಹೇಳಿದ್ದಾರೆ.
ಹಾದಿಯಲ್ಲಿ ನಿಂತು ಹೀಗೆ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಪಕ್ಷಕ್ಕೂ ಗೌರವ ಸಿಗುವುದಿಲ್ಲ. ಪಕ್ಷ ನನ್ನ ಸ್ವತ್ತೂ ಅಲ್ಲ, ಅವರ ಸ್ವತ್ತೂ ಅಲ್ಲ. ಮುಂದಿನ ಸಿಎಂ ಆಗಲು ನಾನು ಪಕ್ಷ ಸಂಘಟನೆ ಮಾಡುತ್ತಿಲ್ಲ ಎಂದಿದ್ದಾರೆ.
ಯತ್ನಾಳ್ ಆಲ್ ದಿ ಬೆಸ್ಟ್
ಶ್ರೀರಾಮುಲು ಹಿರಿಯ ನಾಯಕರು. ಸಚಿವರಾಗಿ, ಹಿರಿಯರಾಗಿ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಕೋರ್ ಕಮಿಟಿ ಆದ ನಂತರ ನಾನೂ ಮಾತಾಡಿದ್ದೇನೆ. ಕೋರ್ ಕಮಿಟಿಯಲ್ಲಿ ನಡೆದಿದ್ದು ಮಾಧ್ಯಮಗಳಲ್ಲಿ ಚರ್ಚೆ ಮಾಡಬಾರದು ಅಂತ ಅವರಿಗೆ ಮನವಿ ಮಾಡಿದ್ದೇನೆ. ನಾಳೆ ಯತ್ನಾಳ್ ಹಾಗೂ ಟೀಮ್ ಸಭೆ ಹಾಗೂ ರಾಜ್ಯಾಧ್ಯಕ್ಷ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, ಆಲ್ ದಿ ಬೆಸ್ಟ್, ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.