ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಪವಿತ್ರಾ ಗೌಡ ಮತ್ತು ಗ್ಯಾಂಗ್ ವಿರುದ್ಧ ನಾಳೆ ಟ್ರಯಲ್ ಆರಂಭ ಆಗಲಿದೆ. ಸಾಕ್ಷ್ಯ ವಿಚಾರಣೆಗೆ ಪೂರ್ವ ಸಿದ್ಧತೆ ಆರಂಭಿಸಿರುವ ಪ್ರಾಸಿಕ್ಯೂಷನ್ ಇಂದು ಘಟನೆಯ ಸ್ಥಳ ಪರಿಶೀಲನೆ ನಡೆಸಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಸ್ಪಾಟ್ ವಿಸಿಟ್ ಟ್ರಯಲ್ ಸಂದರ್ಭದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಹಾಗಾಗಿ ಟ್ರಯಲ್ಗೆ ಸಕಲ ಸಿದ್ಧತೆಯಾಗಿದ್ದು, ಪಟ್ಟಣಗೆರೆ ಶೆಡ್, ಸುಮ್ಮನಹಳ್ಳಿ ಶವ ಎಸೆದ ಜಾಗಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ , ತನಿಖಾಧಿಕಾರಿ ಚಂದನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳು ಹಾಜರಾಗಲಿದ್ದಾರೆ. 7, 8ನೇ ಸಾಕ್ಷಿಗಳಾದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಹಾಗೂ ತಾಯಿ ರತ್ನಪ್ರಭ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಈ ಪ್ರಕರಣದಲ್ಲಿನ ಪ್ರಮುಖ ಸಾಕ್ಷಿಗಳ ವಿಚಾರಣೆ ಬಳಿಕ ದರ್ಶನ್ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಹೇಗಿರಲಿದೆ ದರ್ಶನ್ ಟ್ರಯಲ್?
ಬುಧವಾರ ಕೋರ್ಟ್ನಲ್ಲಿ ರೇಣುಕಾಸ್ವಾಮಿ ತಂದೆ ತಾಯಿ ಸಾಕ್ಷ್ಯ ವಿಚಾರಣೆ ಆಗಲಿದೆ. ರೇಣುಕಾಸ್ವಾಮಿ ಹಿನ್ನೆಲೆ, ಕೊನೆಯ ಭೇಟಿ ಬಗ್ಗೆ ವಿಚಾರಣೆ ಆಗಲಿದೆ. ಅಪಹರಣ, ಶವ ಪತ್ತೆ ಬಗ್ಗೆ ತಂದೆ ತಾಯಿ ವಿವರಿಸಲಿದ್ದಾರೆ. ಸಾಕ್ಷಿಗಳ ಪಾಟೀಸವಾಲಿಗೆ ಆರೋಪಿಗಳ ಪರ ವಕೀಲರು ಸಮಯ ಕೋರಲಿದ್ದಾರೆ. ಇಬ್ಬರ ಹೇಳಿಕೆ ಮುಕ್ತಾಯವಾದರೆ ಮತ್ತೆ ಕೆಲವು ಸಾಕ್ಷಿಗಳಿಗೆ ಸಮನ್ಸ್ ನೀಡಲಾಗುವುದು.
272 ಸಾಕ್ಷಿಗಳಲ್ಲಿ ಮುಖ್ಯ ಸಾಕ್ಷಿಗಳ ವಿಚಾರಣೆಯನ್ನು ಎಸ್‌ಪಿಪಿ ನಡೆಸಲಿದ್ದಾರೆ. ಆರೋಪಿಗಳ ಪರ ವಕೀಲರು ಎಲ್ಲ ಸಾಕ್ಷಿಗಳನ್ನೂ ಪಾಟೀಸವಾಲಿಗೆ ಒಳಪಡಿಸಲಿದ್ದಾರೆ. ನಂತರ ಸಾಕ್ಷ್ಯದ ಬಗ್ಗೆ ಆರೋಪಿಗಳ ಹೇಳಿಕೆ ದಾಖಲು ಮಾಡಲಾಗುವುದು. ತಮ್ಮ ಸಾಕ್ಷ್ಯ ಒದಗಿಸಲು ಆರೋಪಿಗಳಿಗೆ ಅವಕಾಶ ನೀಡಲಾಗುತ್ತದೆ. ಅಂತಿಮವಾಗಿ ವಾದಮಂಡನೆ ಆಲಿಸಿ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಈ ಎಲ್ಲ ಪ್ರಕ್ರಿಯೆ ಮುಗಿಯಲು ಒಂದು ವರ್ಷ ಬೇಕಾಗಬಹುದು.
ಇದನ್ನೂ ಓದಿ : ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ



















