ಮೈಸೂರು: ಹಳೆ ಮೈಸೂರು ಭಾಗದ ದೊಡ್ಡ ಜಾತ್ರೆ (Big Fair) ಎಂದೇ ಖ್ಯಾತವಾಗಿರುವ ಅನ್ನದಾಸೋಹ ಸುತ್ತೂರು ಜಾತ್ರೆಗೆ ಸಕಲ ಸಿದ್ಥತೆ ನಡೆದಿದೆ.
ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ಕ್ಷೇತ್ರದಲ್ಲಿ ಜ. 26ರಿಂದ ಜ. 31 ರ ವರೆಗೆ ಶಿವರಾತ್ರೀಶ್ವರ ಶಿವಯೋಗಿ ಜಾತ್ರಾ ಮಹೋತ್ಸವ ನಡೆಯಲಿದೆ. ಹೀಗಾಗಿ ಸುತ್ತೂರಿಗೆ ಆಗಮಿಸುವ ಭಕ್ತರಿಗಾಗಿ ವಿಶೇಷವಾದ ಪ್ರಸಾದ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಬರುವ ಭಕ್ತರಿಗೆ ಊಟದ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗಬಾರದು ಎಂದು ಜಾತ್ರೆ ನಡೆಯುವ 6 ದಿನಗಳ ಕಾಲವೂ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ಸಂಜೆಯ ಊಟವನ್ನು ವಿತರಣೆ ಮಾಡಲಾಗುತ್ತದೆ. 3 ಹೊತ್ತಿನ ಊಟದಲ್ಲೂ ಅನೇಕ ವಿಧದ ಸಿಹಿ ತಿಂಡಿಗಳನ್ನು ಮಾಡಿ ವಿನಿಯೋಗ ಮಾಡಲಾಗುತ್ತಿದೆ.
ಜಾತ್ರೆಯ ಪ್ರಸಾದ ವಿನಿಯೋಗದಲ್ಲಿ ಪ್ರತಿ ದಿನ ಸುಮಾರು 2.50 ಲಕ್ಷದಿಂದ 3 ಲಕ್ಷ ಜನ ಪ್ರಸಾದ ಸ್ವೀಕಾರ ಮಾಡುತ್ತಾರೆ ಎಂದು ಅಂದಾಜು ಮಾಡಲಾಗಿದೆ. ಪ್ರಸಾದ ತಯಾರಿಕೆಯಲ್ಲಿ 500 ಮಂದಿ ಅಡುಗೆಯವರು, 300 ಜನ ಸಹಾಯಕರು ಕೆಲಸ ಮಾಡಲಿದ್ದಾರೆ. ಬಡಿಸಲು 1,500 ಸ್ವಯಂ ಸೇವಕರು ಕೆಲಸ ನಿರ್ವಹಿಸಲಿದ್ದಾರೆ.
ಈಗಾಗಲೇ 6 ದಿನಗಳ ಪ್ರಸಾದ ವ್ಯವಸ್ಥೆಗೆ 1 ಸಾವಿರ ಕ್ವಿಂಟಾಲ್ ಅಕ್ಕಿ, 200 ಕ್ವಿಂಟಾಲ್ ತೊಗರಿ ಬೇಳೆ, 20 ಲೀಟರ್‌ನ 1500 ಟಿನ್ ಅಡುಗೆ ಎಣ್ಣೆ, 25 ಟನ್ ಬೆಲ್ಲ, 3500 ಕೆ.ಜಿ ಖಾರದ ಪುಡಿ, 110 ಕ್ವಿಂಟಾಲ್ ಕಡಲೆ ಹಿಟ್ಟು, 300 ಕ್ವಿಂಟಾಲ್ ಸಕ್ಕರೆ, 50 ಸಾವಿರ ತೆಂಗಿನ ಕಾಯಿಗಳು, 200 ಕ್ವಿಂಟಾಲ್ ಈರುಳ್ಳಿ ಸೇರಿದಂತೆ ಅಡುಗೆಯ ಪದಾರ್ಥಗಳನ್ನು ಸಂಗ್ರಹಿಸಲಾಗಿದೆ.